ADVERTISEMENT

ಅಮೆರಿಕ ಷೇರುಪೇಟೆಯಲ್ಲಿ ಗೂಳಿ ಓಟ: ದೇಶೀಯ ಷೇರು ಸೂಚ್ಯಂಕಗಳಲ್ಲೂ ಜಿಗಿತ

ಪಿಟಿಐ
Published 14 ಆಗಸ್ಟ್ 2024, 5:30 IST
Last Updated 14 ಆಗಸ್ಟ್ 2024, 5:30 IST
ಷೇರುಪೇಟೆಯಲ್ಲಿ ಗೂಳಿ ಓಟ
ಷೇರುಪೇಟೆಯಲ್ಲಿ ಗೂಳಿ ಓಟ   

ಮುಂಬೈ: ಎರಡು ದಿನಗಳ ಸತತ ಕುಸಿತದ ಬಳಿಕ ದೇಶೀಯ ಷೇರುಪೇಟೆ ಸೂಚ್ಯಂಕಗಳು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿವೆ.

ಅಮೆರಿಕದ ಫೆಡರಲ್ ಬ್ಯಾಂಕ್‌ನಿಂದ ಸೆಪ್ಟೆಂಬರ್‌ನಲ್ಲಿ ಬಡ್ಡಿ ಕಡಿತದ ಸೂಚನೆ ಹಿನ್ನೆಲೆಯಲ್ಲಿ ಅಮೆರಿಕ ಷೇರುಪೇಟೆಯಲ್ಲಿ ಏರುಗತಿಯ ಪರಿಣಾಮ ಭಾರತೀಯ ಪೇಟೆ ಮೇಲೂ ಬಿದ್ದಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 144.92 ಅಂಶಗಳಷ್ಟು ಏರಿಕೆ ಕಂಡು 79,100.95ರಲ್ಲಿ ವಹಿವಾಟು ಆರಂಭಿಸಿದರೆ, ಎನ್‌ಎಸ್‌ಇ ನಿಫ್ಟಿ 57.5 ಅಂಶಗಳಷ್ಟು ಏರಿಕೆ ಕಂಡು 24,196.50ರಲ್ಲಿ ವಹಿವಾಟು ಆರಂಭಿಸಿತು.

ADVERTISEMENT

ಕಳೆದ ವಾರ 82 ಸಾವಿರ ಗಡಿ ದಾಟಿದ್ದ ಸೆನ್ಸೆಕ್ಸ್ ಮತ್ತು ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿದ್ದ ನಿಫ್ಟಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ವದಂತಿಗಳ ಹಿನ್ನೆಲೆ ಮತ್ತು ಇಸ್ರೇಲ್–ಇರಾನ್ ನಡುವೆ ಯುದ್ಧ ವಾತಾವರಣ ಏರ್ಪಟ್ಟ ಪರಿಣಾಮ ಕುಸಿದಿದ್ದವು.

ಸೆನ್ಸೆಕ್ಸ್‌ನ ಷೇರುಗಳ ಪೈಕಿ ಎಚ್‌ಸಿಎಲ್ ಟೆಕ್ನಾಲಜೀಸ್, ಮಹೀಂದ್ರ ಅಂಡ್ ಮಹೀಂದ್ರ, ಟೆಕ್ ಮಹೀಂದ್ರ, ಟಾಟಾ ಮೋಟರ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎನ್‌ಟಿಪಿಸಿ ಅಧಿಕ ಗಳಿಕೆ ಕಂಡ ಷೇರುಗಳಾಗಿವೆ.

ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್, ಅದಾನಿ ಪೋರ್ಟ್ಸ್ ಮತ್ತು ಹಿಂದೂಸ್ಥಾನ್ ಯುನಿಲಿವರ್ ಷೇರುಗಳು ನಷ್ಟ ಅನುಭವಿಸಿವೆ.

ಏಷ್ಯಾ ಷೇರುಪೇಟೆಗಳ ಪೈಕಿ ಸೋಲ್ ಮತ್ತು ಟೋಕಿಯೊ ಏರಿಕೆ ಕಂಡಿದ್ದರೆ, ಶಾಂಘೈ ಮತ್ತು ಹಾಂಗ್‌ಕಾಂಗ್ ಇಳಿಕೆ ಕಂಡಿವೆ.

ಮಂಗಳವಾರಕ್ಕೆ ಹೋಲಿಸಿದರೆ ಅಮೆರಿಕ ಷೇರುಪೇಟೆಯು ಗಮನಾರ್ಹ ಮಟ್ಟದಲ್ಲಿ ಏರಿಕೆ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.