ಮುಂಬೈ (ಪಿಟಿಐ): ಷೇರುಪೇಟೆಯು ಬುಧವಾರದ ವಹಿವಾಟಿನಲ್ಲಿ ಗಮನಾರ್ಹ ಚೇತರಿಕೆ ದಾಖಲಿಸಿದೆ.
ಹಣಕಾಸು, ವಾಹನ ಮತ್ತು ಲೋಹದ ಷೇರುಗಳ ಮಾರಾಟಕ್ಕೆ ಮುಗಿಬಿದ್ದಿದ್ದ ವಹಿವಾಟುದಾರರ ಧೋರಣೆ ಬದಲಾಗಿ ಖರೀದಿ ಆಸಕ್ತಿ ಕಂಡುಬಂದಿದೆ. ಮಾರುತಿ ಸುಜುಕಿ, ಟಾಟಾ ಸ್ಟೀಲ್, ಯೆಸ್ ಬ್ಯಾಂಕ್, ಎಸ್‌ಬಿಐ ಷೇರುಗಳಲ್ಲಿನ ಖರೀದಿ ಆಸಕ್ತಿಯು ಸೂಚ್ಯಂಕ ಚೇತರಿಕೆಗೆ ನೆರವಾಗಿದೆ.
ವಹಿವಾಟಿನ ಮಧ್ಯದಲ್ಲಿ 34,858 ಅಂಶಗಳವರೆಗೆ ಏರಿಕೆ ಕಂಡಿದ್ದ ಸೂಚ್ಯಂಕವು ಅಂತಿಮವಾಗಿ 461 ಅಂಶಗಳಷ್ಟು ಏರಿಕೆ ದಾಖಲಿಸಿ 34,760 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 10,400ರ ಗಡಿ ದಾಟಿತು. ದಿನದಂತ್ಯಕ್ಕೆ 159 ಅಂಶಗಳ ಏರಿಕೆ ಕಂಡು 10,460ರಲ್ಲಿ ಅಂತ್ಯಗೊಂಡಿತು.
ವಹಿವಾಟಿನ ಬಹುತೇಕ ಸಂದರ್ಭದಲ್ಲಿ ಖರೀದಿ ಭರಾಟೆ ಕಂಡು ಬಂದಿದ್ದರಿಂದ ಪ್ರಮುಖ ಷೇರುಗಳು ಏರಿಕೆ ದಾಖಲಿಸಿದವು.
ಹಣಕಾಸಿನ ಮುಗ್ಗಟ್ಟಿಗೆ ಗುರಿಯಾಗಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ನೆರವಿಗೆ ಬರಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿರುವುದು ಪೇಟೆಯಲ್ಲಿ ಉತ್ಸಾಹ ಮೂಡಿಸಿದೆ. ಸರ್ಕಾರಿ ಬಾಂಡ್‌ಗಳ ಖರೀದಿ ಮೂಲಕ ಹಣಕಾಸು ಮಾರುಕಟ್ಟೆಯಲ್ಲಿ ₹ 12 ಸಾವಿರ ಕೋಟಿ ಬಿಡುಗಡೆ ಮಾಡುವುದಾಗಿ ಆರ್‌ಬಿಐ ತಿಳಿಸಿರುವುದೂ ಸಕಾರಾತ್ಮಕ ಪರಿಣಾಮ ಬೀರಿದೆ.
ಕಚ್ಚಾ ತೈಲದ ಬೆಲೆ ಸ್ಥಿರಗೊಂಡಿರುವುದು, ಡಾಲರ್ ಬೆಲೆ ಇಳಿಕೆಯಾಗಿರುವುದರಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳ ಷೇರುಪೇಟೆಗಳಲ್ಲಿ ಮಾರಾಟ ಒತ್ತಡಕ್ಕೆ ತಡೆ ಒಡ್ಡಿದೆ. ಇದು ಕೂಡ ದೇಶಿ ಪೇಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.
ದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ ₹ 1,526 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ. ವಿದೇಶಿ ಹೂಡಿಕೆದಾರರು ₹ 1,242 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.