ADVERTISEMENT

ಮಾರುತಿ ಸುಜುಕಿ: ವಾಹನಗಳ ಮಾರಾಟ ಹೆಚ್ಚಳ

ಹಬ್ಬದ ದಿನಗಳಲ್ಲಿ ಹೆಚ್ಚಿದ ಬೇಡಿಕೆ; ಎಂಆ್ಯಂಡ್‌ಎಂ, ಟಿಕೆಎಂ ಮಾರಾಟ ಕುಸಿತಕ್ಕೆ ಕಡಿವಾಣ

ಪಿಟಿಐ
Published 1 ನವೆಂಬರ್ 2019, 19:47 IST
Last Updated 1 ನವೆಂಬರ್ 2019, 19:47 IST

ನವದೆಹಲಿ : ಹಬ್ಬದ ದಿನಗಳಲ್ಲಿನ ಬೇಡಿಕೆ ಹೆಚ್ಚಳದ ಕಾರಣಕ್ಕೆ ಪ್ರಯಾಣಿಕ, ವಾಣಿಜ್ಯ ವಾಹನ ಮತ್ತು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕೆಲಮಟ್ಟಿಗೆ ಚೇತರಿಕೆ ಕಂಡುಬಂದಿದೆ.

ದೀರ್ಘ ಸಮಯದಿಂದ ಮಾರಾಟ ಕುಸಿತ ಕಂಡಿದ್ದ ವಾಹನ ತಯಾರಿಕಾ ಉದ್ದಿಮೆಯ ಪಾಲಿಗೆ ಧನ್‌ತೇರಸ್‌ ಮತ್ತು ದೀಪಾವಳಿ ಸಂದರ್ಭದಲ್ಲಿನ ಮಾರಾಟ ಹೆಚ್ಚಳವು ಕೆಲಮಟ್ಟಿಗೆ ಸಮಾಧಾನ ತಂದಿದೆ.

ಮಾರುತಿ ಸುಜುಕಿ ಇಂಡಿಯಾ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಮತ್ತು ಟೊಯೋಟ ಕಿರ್ಲೋಸ್ಕರ್‌ ಮೋಟರ್‌ಗಳ ವಾಹನ ಮಾರಾಟದಲ್ಲಿ ಸುಧಾರಣೆ ಕಂಡು ಬಂದಿದೆ. ಮಾರಾಟ ಕುಸಿತದ ಪ್ರಮಾಣ ನಿಯಂತ್ರಿಸುವಲ್ಲಿ ಬಹುತೇಕ ವಾಹನ ತಯಾರಿಕಾ ಕಂಪನಿಗಳು ಯಶಸ್ವಿಯಾಗಿವೆ.

ADVERTISEMENT

ಕಾರ್‌ ತಯಾರಿಸುವ ದೇಶದ ಅತಿದೊಡ್ಡ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ದೇಶಿ ಮಾರಾಟವು ಅಕ್ಟೋಬರ್‌ನಲ್ಲಿ ಶೇ 4.5ರಷ್ಟು ಪ್ರಗತಿ ಕಂಡಿದೆ. ಹಿಂದಿನ ಏಳು ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕಂಪನಿಯ ದೇಶಿ ಮಾರಾಟದಲ್ಲಿ ಏರಿಕೆ ದಾಖಲಾಗಿದೆ.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕೂಡ ಮಾರಾಟ ಕುಸಿತಕ್ಕೆ ತಡೆಹಾಕುವಲ್ಲಿ ಯಶಸ್ವಿಯಾಗಿದೆ. ಮಾರಾಟವು ಶೇ 11ರಷ್ಟು ಮಾತ್ರ ಕುಸಿತ ಕಂಡಿದೆ.

‘ಹಬ್ಬಗಳ ತಿಂಗಳಾದ ಅಕ್ಟೋಬರ್‌ನಲ್ಲಿ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕೆಲಮಟ್ಟಿಗೆ ಚೇತರಿಕೆ ಕಂಡುಬಂದಿದೆ’ ಎಂದು ‘ಎಂಆ್ಯಂಡ್‌ಎಂ’ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿಜಯ್‌ ರಾಮ್‌ ಎನ್‌. ಹೇಳಿದ್ದಾರೆ.

ಟೊಯೋಟ ಕಿರ್ಲೋಸ್ಕರ್‌ ಮೋಟರ್‌ನ ಮಾರಾಟವು ಶೇ 6ರಷ್ಟು ಮಾತ್ರ ಕಡಿಮೆಯಾಗಿದೆ. ‘ಹಬ್ಬದ ದಿನ
ಗಳಲ್ಲಿ ಅದರಲ್ಲೂ ವಿಶೇಷವಾಗಿ ಧನ್‌ತೇರಸ್‌ ಮತ್ತು ದೀಪಾವಳಿ ಸಂದರ್ಭದಲ್ಲಿ ಗ್ರಾಹಕರಿಂದ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿತ್ತು. ಇತ್ತೀಚಿನ ಕೆಲ ತಿಂಗಳುಗಳಲ್ಲಿನ ಕುಸಿತಕ್ಕೆ ಹೋಲಿಸಿದರೆ ಅಕ್ರೋಬರ್‌ನಲ್ಲಿ ಕಂಡು ಬಂದಿರುವ ಚೇತರಿಕೆಯು ಉತ್ತೇಜನಕಾರಿಯಾಗಿದೆ’ ಎಂದು ಟಿಕೆಎಂನ ಉಪ ವ್ಯವಸ್ಥಾಪಕ ನಿರ್ದೇಶಕ ಎನ್. ರಾಜಾ ಹೇಳಿದ್ದಾರೆ.

ವಾಣಿಜ್ಯ ವಾಹನ ತಯಾರಿಸುವ ಅಶೋಕ್‌ ಲೇಲ್ಯಾಂಡ್‌ನ ಮಾರಾಟವು ವರ್ಷದ ಹಿಂದಿನ 14,341ಕ್ಕೆ ಹೋಲಿಸಿದರೆ ಈ ಬಾರಿ 9,074ಕ್ಕೆ ಇಳಿದು ಶೇ 37ರಷ್ಟು ಕುಸಿತ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.