ಕಾರ್ ತಯಾರಿಕೆಯಲ್ಲಿ ದೇಶದ ಅತಿದೊಡ್ಡ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ), ಮಾರುತಿ ಬ್ರ್ಯಾಂಡ್‌ಗೆ ನಿಷ್ಠೆ ಹೊಂದಿರುವ ಗ್ರಾಹಕರನ್ನು ವಿಶಿಷ್ಟವಾಗಿ ಪುರಸ್ಕರಿಸುವ ಕಾರ್ಯಕ್ರಮ ಪರಿಚಯಿಸಿದೆ.
‘ಮಾರುತಿ ಸುಜುಕಿ ರಿವಾರ್ಡ್ಸ್’ ಹೆಸರಿನ ಡಿಜಿಟಲ್ ಕಾರ್ಯಕ್ರಮವು ಕಂಪನಿಯ ಎಲ್ಲ ಪ್ರಯಾಣಿಕ ವಾಹನಗಳಿಗೆ ಅನ್ವಯಿಸುತ್ತದೆ. ಕಂಪನಿಯ ಅರೆನಾ, ನೆಕ್ಸಾ ಮತ್ತು ಟ್ರೂವ್ಯಾಲ್ಯು ಮಳಿಗೆಗಳಲ್ಲಿ ಗ್ರಾಹಕರು ಈ ಪುರಸ್ಕಾರಗಳನ್ನು ಪಡೆಯಬಹುದು.
ಈ ಕಾರ್ಯಕ್ರಮದಡಿ, ‘ಎಂಎಸ್‌ಐ’ ಗ್ರಾಹಕರು ಹೆಚ್ಚುವರಿ ಕಾರ್ ಖರೀದಿ, ಸರ್ವಿಸ್, ವಿಮೆ, ಬಿಡಿಭಾಗ ಖರೀದಿ, ಹೊಸ ಗ್ರಾಹಕರನ್ನು ಪರಿಚಯಿಸುವ ಸಂದರ್ಭಗಳಲ್ಲಿ ಪುರಸ್ಕಾರಗಳನ್ನು ಪಡೆಯಲಿದ್ದಾರೆ.
‘ಗ್ರಾಹಕರು ವಾಹನಕ್ಕೆ ಸಂಬಂಧಿಸಿದಂತೆ ತಮ್ಮೆಲ್ಲ ಅಗತ್ಯಗಳನ್ನು ಈಡೇರಿಸಿಕೊಳ್ಳುವ ಸಂದರ್ಭದಲ್ಲಿ ಪುರಸ್ಕಾರಗಳನ್ನು ಪಡೆದುಕೊಳ್ಳಲಿದ್ದಾರೆ. ಹೆಚ್ಚೆಚ್ಚು ಪುರಸ್ಕಾರಗಳನ್ನು ಪಡೆದ ಗ್ರಾಹಕರಿಗೆ ವಿಶೇಷ ಪ್ರಯೋಜನಗಳೂ ದೊರೆಯಲಿವೆ’ ಎಂದು ಕಂಪನಿಯ ಸಿಇಒ ಕೆನಿಚಿ ಆಯುಕವಾ ಹೇಳಿದ್ದಾರೆ.
ಈ ಪುರಸ್ಕಾರಗಳನ್ನು ದೇಶದಾದ್ಯಂತ ಇರುವ ಮಾರುತಿ ಸುಜುಕಿ ಡೀಲರ್‌ಶಿಪ್‌ಗಳಲ್ಲಿ ಸ್ವೀಕರಿಸಲಾಗುವುದು. ವಾಹನದ ಸರ್ವಿಸ್, ಬಿಡಿಭಾಗ ಖರೀದಿ, ವಾರಂಟಿ ವಿಸ್ತರಣೆ, ವಿಮೆ ಖರೀದಿ, ಕಂಪನಿಯ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ತರಬೇತಿ ಪಡೆಯುವಲ್ಲಿಯೂ ಈ ಪುರಸ್ಕಾರಗಳನ್ನು ಬಳಸಿಕೊಳ್ಳಬಹುದು.
ಈ ಕಾರ್ಯಕ್ರಮದಡಿ ಗ್ರಾಹಕರನ್ನು ಮೆಂಬರ್, ಸಿಲ್ವರ್, ಗೋಲ್ಡ್ ಮತ್ತು ಪ್ಲಾಟಿನಂ ಎಂದು ನಾಲ್ಕು ವಿಧದಲ್ಲಿ ವರ್ಗೀಕರಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಗ್ರಾಹಕರು ಕಂಪನಿಯಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ರವಾನಿಸಲಾಗುವುದು. ಪ್ರತಿಯೊಂದು ವಹಿವಾಟಿಗೆ ಗ್ರಾಹಕರು ಪಡೆಯುವ ಪುರಸ್ಕಾರದ ವಿವರ ಕಂಪನಿಯ ಅಂತರ್ಜಾಲ ತಾಣದಲ್ಲಿ ಲಭ್ಯ ಇರಲಿದೆ.
ಹಾಲಿ ’ಆಟೊ ಕಾರ್ಡ್’ ಮತ್ತು ‘ಮೈ ನೆಕ್ಸಾ’ ಕಾರ್ಯಕ್ರಮದ ಸದಸ್ಯರನ್ನು ಈ ಹೊಸ ಪುರಸ್ಕಾರ ಕಾರ್ಯಕ್ರಮಕ್ಕೆ ವರ್ಗಾಯಿಸಲಾಗುವುದು. ‘ಮಾರುತಿ ಸುಜುಕಿ ರಿವಾರ್ಡ್ಸ್’ ಕಾರ್ಯಕ್ರಮಕ್ಕೆ ಸೇರ್ಪಡೆಯಾಗಲು ಗ್ರಾಹಕರು www.marutisuzuki.com or www.nexaexperience.com ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ವಿವರ ಭರ್ತಿ ಮಾಡಲು ಕಂಪನಿ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.