ನವದೆಹಲಿ: ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಕಾರುಗಳಾದ ವ್ಯಾಗನ್‌ಆರ್ ಮತ್ತು ಆಲ್ಟೊ ಕೆ10, ವಯಸ್ಕ ಪ್ರಯಾಣಿಕರ ಸುರಕ್ಷತಾ ಪರೀಕ್ಷೆಯಲ್ಲಿ ಕ್ರಮವಾಗಿ ‘ಒನ್ ಸ್ಟಾರ್’ ಹಾಗೂ ‘ಟೂ ಸ್ಟಾರ್’ ರೇಟಿಂಗ್ ಪಡೆದಿವೆ ಎಂದು ವಾಹನಗಳ ಸುರಕ್ಷತೆಯನ್ನು ಅಳೆಯುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆ ಹೇಳಿದೆ.
ಪ್ರಯಾಣಿಕರು ಮಕ್ಕಳಾಗಿದ್ದರೆ, ಅವರ ಸುರಕ್ಷತೆಯ ವಿಚಾರದಲ್ಲಿ ಎರಡೂ ಮಾದರಿಗಳು ಶೂನ್ಯ ರೇಟಿಂಗ್ ಪಡೆದಿವೆ. ಆದರೆ, ತಾನು ತಯಾರಿಸುವ ಕಾರುಗಳು ಭಾರತದ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಇವೆ, ಈ ಮಾನದಂಡಗಳು ಯುರೋಪಿನ ಮಾನದಂಡಗಳಿಗೆ ಹೋಲುವಂತಿವೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.
ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ವಾಹನಗಳಿಗೆ ಶೂನ್ಯದಿಂದ ಐದು ಸ್ಟಾರ್‌ವರೆಗೆ ರೇಟಿಂಗ್ ನೀಡುತ್ತದೆ. ಹೆಚ್ಚು ರೇಟಿಂಗ್ ಇರುವ ವಾಹನಗಳು ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗಿದೆ.
‘ಮಾರುತಿ ಸುಜುಕಿ ಪಾಲಿಗೆ ಸುರಕ್ಷತೆಯು ಆದ್ಯತೆಯ ವಿಷಯಗಳಲ್ಲೊಂದು. ಭಾರತದಲ್ಲಿನ ಸುರಕ್ಷತಾ ಮಾನದಂಡಗಳು ಯುರೋಪಿನ ಮಾನದಂಡಗಳಿಗೆ ಸರಿಹೊಂದುವಂತೆ ಇವೆ. ನಮ್ಮ ಎಲ್ಲ ಮಾದರಿಯ ವಾಹನಗಳು ಭಾರತದ ಮಾನದಂಡಗಳಿಗೆ ಅನುಗುಣವಾಗಿವೆ. ನಮ್ಮ ವಾಹನಗಳನ್ನು ಕೇಂದ್ರ ಸರ್ಕಾರವು ಪರೀಕ್ಷಿಸಿ, ಪ್ರಮಾಣಪತ್ರ ನೀಡುತ್ತಿದೆ’ ಎಂದು ಮಾರುತಿ ಸುಜುಕಿ ವಕ್ತಾರರು ಹೇಳಿದ್ದಾರೆ.
ಫೋಕ್ಸ್‌ವ್ಯಾಗನ್ ವರ್ಟುಸ್ ಮತ್ತು ಸ್ಕೋಡಾ ಸ್ಲಾವಿಯಾ ಕಾರುಗಳು ವಯಸ್ಕ ಹಾಗೂ ಮಕ್ಕಳ ವಿಭಾಗಗಳಲ್ಲಿ ಫೈವ್ ಸ್ಟಾರ್ ರೇಟಿಂಗ್ ಪಡೆದಿವೆ ಎಂದು ಗ್ಲೋಬಲ್ ಎನ್‌ಸಿಎಪಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.