ಕಳಸ (ಚಿಕ್ಕಮಗಳೂರು ಜಿಲ್ಲೆ): ವಾರದ ಹಿಂದೆ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಧಾರಣೆಯು ಪ್ರತಿ ಟನ್‍ಗೆ 3,744 ಡಾಲರ್‌ಗೆ ಏರಿಕೆಯಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲೂ ಬೆಲೆಯು ಏರುಗತಿಯಲ್ಲಿದೆ.
ನಾಲ್ಕು ದಿನಗಳ ಹಿಂದೆ ಒಂದು ಕೆ.ಜಿಗೆ ₹360 ದರ ಹೆಚ್ಚಳವಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಸದ್ಯ ಒಂದು ಕೆ.ಜಿಗೆ ₹356 ಬೆಲೆ ಇದೆ. ಉತ್ತಮ ಬೆಲೆ ಸಿಗುತ್ತಿರುವುದರಿಂದ ಬೆಳೆಗಾರರು ಖುಷಿಯಲ್ಲಿದ್ದಾರೆ.
ವಿಯೆಟ್ನಾಂನಲ್ಲಿ ಬರಗಾಲ ತಲೆದೋರಿದ್ದು ರೊಬಸ್ಟಾ ಕಾಫಿ ಉತ್ಪಾದನೆಯು ಶೇ 20ರಷ್ಟು ಕುಸಿದಿದೆ. ಎಲ್‌ನಿನೊದಿಂದಾಗಿ ಹವಾಮಾನದಲ್ಲಿ ಆದ ಬದಲಾವಣೆಯು ಅಲ್ಲಿನ ಕಾಫಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ.
ಹೀಗಾಗಿ, ಜಾಗತಿಕ ಮಟ್ಟದಲ್ಲಿ ರೊಬಸ್ಟಾ ಉತ್ಪಾದನೆಯಲ್ಲಿ 27 ಲಕ್ಷ ಚೀಲಗಳಷ್ಟು ಕೊರತೆ ಕಂಡುಬಂದಿದೆ. ಆದ್ದರಿಂದ ಬೆಲೆ ಇನ್ನಷ್ಟು ಏರುವ ಸಾಧ್ಯತೆ ಇದೆ ಎನ್ನುತ್ತಾರೆ ಕಾಫಿ ಮಾರಾಟಗಾರರು.
ಕಳೆದ ವಾರ ಬ್ರೆಜಿಲ್‌ನಲ್ಲಿ ಧಾರಾಕಾರ ಮಳೆ ಸುರಿದಿರುವುದರಿಂದ ಅಲ್ಲಿ ಬೆಳೆಯಲಾಗಿದ್ದ ಅರೇಬಿಕಾ ಕಾಫಿ ಫಸಲಿಗೆ ಹಾನಿಯಾಗಿದೆ. ಹಾಗಾಗಿ, ಅರೇಬಿಕಾ ಕಾಫಿ ಧಾರಣೆಯೂ ಏರುತ್ತಿದೆ.
ಸದ್ಯ 50 ಕೆ.ಜಿ ಅರೇಬಿಕಾ ಪಾರ್ಚ್‍ಮೆಂಟ್‌ಗೆ ₹15,000 ದರ ಇದೆ. ಅರೇಬಿಕಾ ಬೇಳೆ ಬೆಲೆ ಕೆ.ಜಿಗೆ ₹300 ಇದೆ. ರೊಬಸ್ಟಾದ 50 ಕೆ.ಜಿ ಪಾರ್ಚ್‍ಮೆಂಟ್‌ಗೆ ₹15,400 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.