ನವದೆಹಲಿ: ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಪ್ರಮಾಣವು ಮೇ ತಿಂಗಳಿನಲ್ಲಿ ಶೇಕಡ (–) 3.48ಕ್ಕೆ ಕುಸಿದಿದೆ. ಇದು ಏಳು ವರ್ಷಗಳ ಕನಿಷ್ಠ ಮಟ್ಟ. 2015ರ ನವೆಂಬರ್‌ನಲ್ಲಿ ಸಗಟು ಹಣದುಬ್ಬರವು ಶೇ (–) 3.7ರಷ್ಟು ಇತ್ತು.
ಆಹಾರ, ಇಂಧನ ಮತ್ತು ತಯಾರಿಕಾ ವಸ್ತುಗಳ ದರ ಇಳಿಕೆ ಆಗಿದೆ. ಈ ನಡುವೆ, ಸಗಟು ಹಣದುಬ್ಬರ ಪ್ರಮಾಣ ಸತತ ಎರಡನೆಯ ತಿಂಗಳಿನಲ್ಲಿಯೂ ಇಳಿಕೆ ಕಂಡಿದೆ. ಇದರಿಂದಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಬಡ್ಡಿದರ ಏರಿಕೆಗೆ ಆರ್‌ಬಿಐ ತಡೆ ನೀಡುವ ವಾತಾವರಣ ಸೃಷ್ಟಿ ಆಗುತ್ತಿದೆ.
ಸತತ ಎರಡನೇ ತಿಂಗಳಿನಲ್ಲಿಯೂ ಸಗಟು ಹಣದುಬ್ಬರವು ನಕಾರಾತ್ಮಕ ವಲಯವನ್ನು ತಲುಪಿದಂತಾಗಿದೆ. ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೇ (–) 0.92ಕ್ಕೆ ತಲುಪಿತ್ತು. ಕಳೆದ ವರ್ಷದ ಮೇ ತಿಂಗಳಿನಲ್ಲಿ ಡಬ್ಲ್ಯುಪಿಐ ಶೇ 16.63ರಷ್ಟು ಗರಿಷ್ಠ ಮಟ್ಟದಲ್ಲಿ ದಾಖಲಾಗಿತ್ತು.
ಮೇ ನಲ್ಲಿ ಚಿಲ್ಲರೆ ಹಣದುಬ್ಬರವು 25 ತಿಂಗಳ ಕನಿಷ್ಠ ಮಟ್ಟವಾದ ಶೇ 4.25ಕ್ಕೆ ಇಳಿಕೆ ಕಂಡಿದೆ.
ಮೂಲ ಲೋಹಗಳು, ಆಹಾರ ಉತ್ಪನ್ನಗಳು, ಜವಳಿ, ಆಹಾರೇತರ ವಸ್ತಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳ ಬೆಲೆ ಇಳಿಕೆ ಆಗಿರುವುದರಿಂದ ಹಣದುಬ್ಬರದ ದರ ಕಡಿಮೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಬುಧವಾರ ಹೇಳಿದೆ.
ಆಹಾರ ವಸ್ತುಗಳ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 3.54ರಷ್ಟು ಇದ್ದಿದ್ದು ಮೇನಲ್ಲಿ ಶೇ 1.51ಕ್ಕೆ ಇಳಿಕೆ ಕಂಡಿದೆ.
ತರಕಾರಿಗಳ ಹಣದುಬ್ಬರವು ಶೇ (–) 20.12, ಆಲೂಗಡ್ಡೆ ದರ ಶೇ (–) 18.71 ಮತ್ತು ಈರುಳ್ಳಿ ದರ ಶೇ (–) 7.25ಕ್ಕೆ ಇಳಿಕೆ ಕಂಡಿದೆ. ಆದರೆ, ಬೇಳೆಕಾಳುಗಳ ಹಣದುಬ್ಬರವು ಶೇ 5.76ರಷ್ಟು ಮತ್ತು ಗೋಧಿ ಶೇ 6.15ರಷ್ಟು ಏರಿಕೆ ಕಂಡಿದೆ.
ಇಂಧನ ಮತ್ತು ವಿದ್ಯುತ್ ಹಣದುಬ್ಬರವು ಶೇ (–) 9.17ಕ್ಕೆ ತಲುಪಿದೆ. ಏಪ್ರಿಲ್‌ನಲ್ಲಿ ಶೇ 0.93ರಷ್ಟು ಇತ್ತು.
ಭಾರತವು ರಷ್ಯಾದಿಂದ ಕಡಿಮೆ ಬೆಲೆಗೆ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ದುಪ್ಪಟ್ಟು ಮಾಡಿಕೊಂಡಿದೆ. ಇಂಧನ ದರದ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹಣದುಬ್ಬರವನ್ನು ತಗ್ಗಿಸಲು ಇದು ನೆರವಾಗಿದೆ ಎಂದು ಮೂಡಿಸ್‌ನ ವಿಶ್ಲೇಷಕ ಸ್ಟೀವ್ ಕೊಕ್ರೇನ್ ಹೇಳಿದ್ದಾರೆ.
ಚಿಲ್ಲರೆ ಹಣದುಬ್ಬರವು ಅಲ್ಪಾವಧಿಯಲ್ಲಿ ಇಳಿಮುಖ ಹಾದಿಯಲ್ಲಿ ಇರುವ ನಿರೀಕ್ಷೆ ಇದೆ. ಇದರಿಂದಾಗಿ 2023–24ನೇ ಹಣಕಾಸು ವರ್ಷದಲ್ಲಿ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಬಡ್ಡಿದರ ಹೆಚ್ಚಳ ಮಾಡದೇ ಇರುವಂತಾಗುವ ಸಾಧ್ಯತೆ ಇದೆ ಎಂದು ಬರ್ಕ್ಲೇಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಬಜೋರಿಯಾ ತಿಳಿಸಿದ್ದಾರೆ.
ಸಗಟು ದರವು ನಕಾರಾತ್ಮಕ ಮಟ್ಟದಲ್ಲಿ ಇರುವುದರಿಂದ ಒಟ್ಟಾರೆಯಾಗಿ ವೆಚ್ಚ ತಗ್ಗಿಸಲು ನೆರವಾಗಲಿದೆ ಎಂದು ಅಸೋಚಾಂನ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ಅಭಿಪ್ರಾಯಪಟ್ಟಿದ್ದಾರೆ.
ಸಗಟು ಹಣದುಬ್ಬರದ ಇಳಿಮುಖ ಹಾದಿ ಮುಂದುವರಿಯುವ ನಿರೀಕ್ಷೆ ಇದೆ. ಇನ್ನು ಮುಂಗಾರಿನತ್ತ ನಾವು ಗಮನ ಹರಿಸಬೇಕಿದೆ. ಏಕೆಂದರೆ ತಯಾರಾದ ವಸ್ತುಗಳಿಗಿಂತಲೂ ಆಹಾರ ವಸ್ತುಗಳ ದರದ ಮೇಲೆ ಮಳೆಯು ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.