ADVERTISEMENT

ವ್ಯಾಪಾರ ವಿಸ್ತರಣೆ ಭಾಗವಾಗಿ 5,000 ಜನರನ್ನು ನೇಮಿಸಿಕೊಳ್ಳಲಿದೆ ಮೆಕ್‌ಡೊನಾಲ್ಡ್ಸ್

ಪಿಟಿಐ
Published 12 ಡಿಸೆಂಬರ್ 2022, 13:22 IST
Last Updated 12 ಡಿಸೆಂಬರ್ 2022, 13:22 IST
ಮೆಕ್‌ಡೊನಾಲ್ಡ್ಸ್
ಮೆಕ್‌ಡೊನಾಲ್ಡ್ಸ್   

ಬೆಂಗಳೂರು: ಅಮೆರಿಕದ ಫಾಸ್ಟ್‌ ಫುಡ್‌ ಸಂಸ್ಥೆ ‘ಮೆಕ್‌ಡೊನಾಲ್ಡ್ಸ್‌ಇಂಡಿಯಾ ಭವಿಷ್ಯದಲ್ಲಿ ಸುಮಾರು 5,000 ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಾಗಿ ಸೋಮವಾರ ಹೇಳಿದೆ.

ಮುಂದಿನ ಮೂರು ವರ್ಷಗಳಲ್ಲಿ ದೇಶದ ಉತ್ತರ ಮತ್ತು ಪೂರ್ವ ಭಾಗದಲ್ಲಿ 300 ರೆಸ್ಟೋರೆಂಟ್‌ಗಳನ್ನು ಆರಂಭಿಸಲು ಮೆಕ್‌ಡೊನಾಲ್ಡ್ಸ್‌ ಯೋಜಿಸಿದೆ. ಈ ಮೂಲಕ ಔಟ್‌ಲೆಟ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವತ್ತ ದೃಷ್ಟಿಹರಿಸಿದೆ ಎಂದು ಅದರ ಅಧಿಕಾರಿಗಳು ಸೋಮವಾರ ಹೇಳಿದರು.

ಇದರ ಭಾಗವಾಗಿ ಮೆಕ್‌ಡೊನಾಲ್ಡ್ಸ್‌ ಸೋಮವಾರ ಗುವಾಹಟಿಯಲ್ಲಿ ಭಾರತದ ಅತಿ ದೊಡ್ಡ ರೆಸ್ಟೋರೆಂಟ್‌ ಅನ್ನು ಆರಂಭಿಸಿತು. ಈ ರೆಸ್ಟೋರೆಂಟ್‌ 6,700 ಚದರ ಅಡಿಗಳಷ್ಟು ವಿಶಾಲವಾಗಿದ್ದು, ಏಕಕಾಲದಲ್ಲಿ 220 ಜನರು ಕುಳಿತು ಆಹಾರ ಸೇವಿಸಬಹುದಾಗಿದೆ.

ADVERTISEMENT

ಸುದ್ದಿ ಸಂಸ್ಥೆ ಪಿಟಿಐ ಜತೆಗೆ ಮಾತನಾಡಿರುವ ಮೆಕ್‌ಡೊನಾಲ್ಡ್ಸ್‌ಇಂಡಿಯಾ (ಉತ್ತರ ಮತ್ತು ಪೂರ್ವ) ವ್ಯವಸ್ಥಾಪಕ ನಿರ್ದೇಶಕ ರಾಜೀವ್ ರಂಜನ್, ‘ಕಂಪನಿಯು ತ್ವರಿತ ಬೆಳವಣಿಗೆಯ ಹಾದಿಯಲ್ಲಿದೆ. ಹಲವು ರಾಜ್ಯಗಳಲ್ಲಿ ವಿಸ್ತರಣೆಯತ್ತ ಗಮನ ಹರಿಸುತ್ತಿದೆ. ಸಮಸ್ಯೆಗಳನ್ನೆಲ್ಲ ಬದಿಗಿರಿಸಿ ವ್ಯವಹಾರವನ್ನು ಬೆಳೆಸುವತ್ತ ಗಮನಹರಿಸಿದ್ದೇವೆ’ ಎಂದು ತಿಳಿಸಿದರು. ಮೆಕ್‌ಡೊನಾಲ್ಡ್ಸ್‌ನ ಈ ಹಿಂದಿನ ಪಾಲುದಾರರೊಂದಿಗಿನ ಕಾನೂನು ಸಂಘರ್ಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವರು ಹೀಗೆ ಹೇಳಿದರು.

ಮೆಕ್‌ಡೊನಾಲ್ಡ್ಸ್‌ 2020 ರಲ್ಲಿ ಎಂಎಂಜಿ ಗ್ರೂಪ್‌ನ ಅಧ್ಯಕ್ಷ ಸಂಜೀವ್ ಅಗರವಾಲ್ ಅವರನ್ನು ತನ್ನ ಪಾಲುದಾರರನ್ನಾಗಿ ಆರಿಸಿಕೊಂಡಿತು. ಉತ್ತರ ಮತ್ತು ಪೂರ್ವ ಭಾರತದಲ್ಲಿನ ಔಟ್‌ಲೆಟ್‌ಗಳ ನಿರ್ವಹಣೆಯ ಹೊಣೆಯನ್ನೂ ಅವರಿಗೆ ನೀಡಿದೆ.

ಮೆಕ್‌ಡೊನಾಲ್ಡ್ಸ್‌ ಭಾರತದಲ್ಲಿ ಇಬ್ಬರು ಫ್ರಾಂಚೈಸಿಗಳನ್ನು ಹೊಂದಿದೆ. ಉತ್ತರ ಮತ್ತು ಪೂರ್ವ ಭಾರತದ ರೆಸ್ಟೋರೆಂಟ್‌ಗಳನ್ನು ಸಂಜೀವ್ ಅಗರವಾಲ್ ನೇತೃತ್ವದ ‘ಎಂಎಂಜಿ ಗ್ರೂಪ್‌’ ಮೇಲ್ವಿಚಾರಣೆ ನಡೆಸುತ್ತಿದ್ದರೆ, ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಬಿಎಲ್‌ ಜಟಿಯಾ ನೇತೃತ್ವದ ‘ವೆಸ್ಟ್‌ಲೈಫ್ ಗ್ರೂಪ್’ ಉಸ್ತುವಾರಿ ವಹಿಸಿದೆ.

ಕಂಪನಿಯು ಪ್ರಸ್ತುತ ಉತ್ತರ ಮತ್ತು ಪೂರ್ವ ಭಾರತದಲ್ಲಿ 156 ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತಿದೆ.

ಉದ್ಯೋಗಿಗಳ ಸಾಮರ್ಥ್ಯ ಮತ್ತು ಭವಿಷ್ಯದ ನೇಮಕಾತಿಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ರಾಜೀವ್‌ ರಂಜನ್‌, ‘ಸದ್ಯ ನಮ್ಮ ಬಳಿ 5,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಉದ್ಯಮ ವಿಸ್ತರಣೆಯಾದಂತೆಲ್ಲ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತೇವೆ. ಉದ್ಯೋಗಿಗಳ ಸಂಖ್ಯೆ ಮೂರು ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.