ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾದಲ್ಲಿ (ಬಿಒಬಿ), ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳ ವಿಲೀನ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಬುಧವಾರ ತನ್ನ ಸಮ್ಮತಿ ನೀಡಿದೆ.
ಈ ಮೂರೂ ಬ್ಯಾಂಕ್‌ಗಳ ವಿಲೀನದಿಂದ ‘ಬಿಒಬಿ’ಯು ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿ ಅಸ್ತಿತ್ವಕ್ಕೆ ಬರಲಿದ್ದು,ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಬ್ಯಾಂಕ್ ಆಗಿರಲಿದೆ. ಸದ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಮೊದಲ ಎರಡು ಸ್ಥಾನಗಳಲ್ಲಿ ಇವೆ.
‘ಈ ವಿಲೀನದಿಂದ ಮೂರೂ ಬ್ಯಾಂಕ್‌ಗಳ ಸಿಬ್ಬಂದಿಯ ಸೇವಾ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಿಬ್ಬಂದಿ ಕಡಿತವೂ ಆಗುವುದಿಲ್ಲ’ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿಯೇ ಈ ವಿಲೀನ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈ ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಈಗಾಗಲೇ ವಿಲೀನ ಪ್ರಸ್ತಾವಕ್ಕೆ ಪ್ರತ್ಯೇಕವಾಗಿ ತಮ್ಮ ಅಂಗೀಕಾರ ನೀಡಿವೆ. ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಕೆಲ ಸಮಯ ಬೇಕಾಗಬಹುದು.
ಮೂರೂ ಬ್ಯಾಂಕ್‌ಗಳ ವಿಲೀನದ ನಂತರ ಅವುಗಳ ಒಟ್ಟಾರೆ ವಹಿವಾಟಿನ ಮೊತ್ತವು ₹ 14.82 ಲಕ್ಷ ಕೋಟಿಗಳಷ್ಟಾಗಲಿದೆ.
ಈ ವಿಲೀನದ ನಂತರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆ 19ಕ್ಕೆ ಇಳಿಯಲಿದೆ. 2017ರ ಏಪ್ರಿಲ್‌ನಲ್ಲಿ ಐದು ಸಹವರ್ತಿ ಬ್ಯಾಂಕ್‌ಗಳು ಎಸ್‌ಬಿಐನಲ್ಲಿ ವಿಲೀನಗೊಂಡಿದ್ದವು.
ಷೇರು ಅನುಪಾತ ಅಂತಿಮ
ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್‌ಗಳ ಜತೆಗಿನ ವಿಲೀನಕ್ಕೆ ಸಂಬಂಧಿಸಿದಂತೆ, ಬ್ಯಾಂಕ್ ಆಫ್ ಬರೋಡಾ (ಬಿಒಬಿ), ತನ್ನ ಷೇರುಗಳ ಅದಲು ಬದಲು ಅನುಪಾತವನ್ನು ಬುಧವಾರ ಅಂತಿಮಗೊಳಿಸಿದೆ.
ವಿಲೀನ ಯೋಜನೆ ಅನ್ವಯ, ವಿಜಯ ಬ್ಯಾಂಕ್‌ನ ಷೇರುದಾರರು ಪ್ರತಿ 1,000 ಷೇರುಗಳಿಗೆ ‘ಬಿಒಬಿ’ಯ 402 ಷೇರುಗಳನ್ನು ಪಡೆಯಲಿದ್ದಾರೆ. ದೇನಾ ಬ್ಯಾಂಕ್‌ನ ಷೇರುದಾರರು ಪ್ರತಿ ಒಂದು ಸಾವಿರ ಷೇರುಗಳಿಗೆ ‘ಬಿಒಬಿ’ಯ 110 ಷೇರುಗಳನ್ನು ಪಡೆಯಲಿದ್ದಾರೆ.
ಷೇರು ಬೆಲೆ: ಬುಧವಾರದ ಷೇರುಪೇಟೆ ವಹಿವಾಟಿನಲ್ಲಿ ‘ಬಿಒಬಿ’ ಷೇರಿನ ಬೆಲೆ ಶೇ 3.16ರಷ್ಟು ಕಡಿಮೆಯಾಗಿ ₹ 119.40ಕ್ಕೆ ಇಳಿದಿದೆ.ವಿಜಯ ಬ್ಯಾಂಕ್‌ನ ಪ್ರತಿ ಷೇರು ಬೆಲೆ ₹ 51.05 ಮತ್ತು ದೇನಾ ಬ್ಯಾಂಕ್‌ನ ಷೇರು ಬೆಲೆ ₹ 17.95ಕ್ಕೆ ನಿಗದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.