ADVERTISEMENT

ಐ.ಟಿ ರಿಟರ್ನ್‌: ವಂಚನೆಯ ಸಂದೇಶ

ಜಾಗರೂಕರಾಗಿರಲು ತೆರಿಗೆದಾರರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 17:46 IST
Last Updated 8 ಆಗಸ್ಟ್ 2018, 17:46 IST
CYBER THEFT
CYBER THEFT   

ನವದೆಹಲಿ (ಪಿಟಿಐ): ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ಸೈಬರ್‌ ಅಪರಾಧಿಗಳು ಕಳಿಸುವ ವಂಚನೆ ಉದ್ದೇಶದ ಎಸ್‌ಎಂಎಸ್‌ ಮತ್ತು ಇ–ಮೇಲ್‌ಗಳ ಬಗ್ಗೆ ತೆರಿಗೆ ಪಾವತಿದಾರರು ಎಚ್ಚರದಿಂದ ಇರಲು ಸೂಚಿಸಲಾಗಿದೆ.

ಐ.ಟಿ ರಿಟರ್ನ್‌ ಸಲ್ಲಿಸಿದವರ ಮರುಪಾವತಿ ಅನುಮೋದಿಸಲಾಗಿದ್ದು, ಬ್ಯಾಂಕ್‌ ಮಾಹಿತಿ ನೀಡಿ ಹಣ ಪಡೆಯಿರಿ ಎಂದು ಬರುವ ನಕಲಿ ಸಂದೇಶ ಮತ್ತು ಇ–ಮೇಲ್‌ಗಳನ್ನು ನಿರ್ಲಕ್ಷಿಸಿ ಎಂದು ಕೇಂದ್ರ ಸರ್ಕಾರದ ಸೈಬರ್‌ ಸುರಕ್ಷತಾ ಸಂಸ್ಥೆ ‘ಕಂಪ್ಯೂಟರ್‌ ಕ್ಷಿಪ್ರ ಪ್ರತಿಕ್ರಿಯಾ ತಂಡ’ (ಸಿಇಆರ್‌ಟಿ–ಇನ್‌) ಮನವಿ ಮಾಡಿಕೊಂಡಿದೆ.

ವಂಚನೆ ಉದ್ದೇಶದ ನಕಲಿ ಎಸ್‌ಎಂಎಸ್‌ಗಳನ್ನು ಗುರುತಿಸುವ ಬಗ್ಗೆ ತಂಡವು ಮಾಹಿತಿ ನೀಡಿದೆ. bit.ly, goo.gl, ow.ly and t.co ಹೆಸರಿನ ಅಂತರ್ಜಾಲ ತಾಣದ ವಿಳಾಸದಿಂದ ಬರುವ ಎಸ್‌ಎಂಎಸ್‌ಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ತಿಳಿಸಿದೆ.

ADVERTISEMENT

ಆದಾಯ ತೆರಿಗೆಯಲ್ಲಿನ ಹೆಚ್ಚುವರಿ ಹಣ ಮರಳಿಸುವುದಕ್ಕೆ ಅಂಗೀಕಾರ ದೊರೆತಿದೆ. ಶೀಘ್ರದಲ್ಲಿಯೇ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಲಿದೆ ಎನ್ನುವ ಎಸ್‌ಎಂಎಸ್‌, ಅದರ ಬೆನ್ನಲ್ಲೆ ವಂಚನೆ ಉದ್ದೇಶದ ತಪ್ಪಾಗಿ ಉಲ್ಲೇಖಿಸಿದ ಬ್ಯಾಂಕ್‌ ಖಾತೆಯ ವಿವರ ಬರುತ್ತದೆ. ಈ ಖಾತೆ ಸಂಖ್ಯೆ ತಪ್ಪಾಗಿದ್ದರೆ ಎಸ್‌ಎಂಎಸ್‌ನಲ್ಲಿ ಇರುವ ಅಂತರ್ಜಾಲ ತಾಣ ಕ್ಲಿಕ್‌ ಮಾಡಿ ಸರಿಯಾದ ಬ್ಯಾಂಕ್‌ ಖಾತೆ ಸಂಖ್ಯೆ ನಮೂದಿಸಲು ಸೂಚಿಸಲಾಗುತ್ತದೆ.

ಎಸ್‌ಎಂಎಸ್‌ನಲ್ಲಿನ ನಕಲಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡುತ್ತಿದ್ದಂತೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವನ್ನೇ ಹೋಲುವ ವಂಚನೆಯ ತಾಣ ತೆರೆದುಕೊಳ್ಳುತ್ತದೆ. ಅಲ್ಲಿರುವ ರಿಟರ್ನ್‌ ಸಲ್ಲಿಕೆಯ ಅರ್ಜಿ ಭರ್ತಿ ಮಾಡಿ ಲಾಗಿನ್‌ ಮತ್ತು ಪಾಸ್‌ವರ್ಡ್‌ ನಮೂದಿಸಲು ಸೂಚಿಸಲಾಗುತ್ತದೆ. ಈ ಮೂಲಕ ಪಡೆಯುವ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.