ಚೆನ್ನೈ: ಹೊಸ ಪೀಳಿಗೆಯವರು ಸಂಚಾರಕ್ಕೆ ಉಬರ್ ಮತ್ತು ಓಲಾ ಕ್ಯಾಬ್‌ಗಳನ್ನು ನೆಚ್ಚಿಕೊಳ್ಳುತ್ತಿರುವುದರಿಂದ ಹೊಸ ಕಾರುಗಳ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಆಟೊಮೊಬೈಲ್ ವಲಯದಲ್ಲಿ ಮಾರಾಟ ಕುಸಿತಕ್ಕೆ ಇದೂ ಸಹ ಕಾರಣ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
‘ಆಟೊಮೊಬೈಲ್ ವಲಯದ ಮೇಲೆ ಹಲವು ಸಂಗತಿಗಳು ಪರಿಣಾಮ ಬೀರಿವೆ.ಭಾರತ್ ಸ್ಟೇಜ್ 6(ಬಿಎಸ್6) ಪರಿಮಾಣ ವಾಹನಗಳಿಗೆ ಕಾದಿರುವುದು, ನೋಂದಣಿ ಶುಲ್ಕ, ಇಎಂಐ ಕಟ್ಟಿ ವಾಹನ ಕೊಳ್ಳುವುದಕ್ಕಿಂತ ಓಲಾ ಅಥವಾ ಉಬರ್ ಅಥವಾ ಮೆಟ್ರೊ ಬಳಕೆಗೆ ಮುಂದಾಗಿರುವ ಹೊಸ ಪೀಳಿಗೆಯವರ ಯೋಚನೆಸಹ ಪರಿಣಾಮ ಬೀರಿರುವ ಸಂಗತಿಗಳು‘ ಎಂದಿದ್ದಾರೆ.
ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ದೇಶದ ಟ್ರಕ್ ತಯಾರಿಕಾ ಸಂಸ್ಥೆ ಅಶೋಕ ಲೇಲ್ಯಾಂಡ್ ವಾಹನಗಳ ಮಾರಾಟದಲ್ಲಿ ಶೇ 70ರಷ್ಟು ಕಡಿಮೆಯಾಗಿದೆ. ’ಲಕ್ಷಾಂತರ ಉದ್ಯೋಗ ನಷ್ಟಕ್ಕೂ ಕಾರಣವಾಗಿರುವ ಆಟೋಮೊಬೈಲ್ ವಲಯದಲ್ಲಿನ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಕಾರ್ಯನಿರತವಾಗಿದೆ‘ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೇ ಅವಧಿಯ 100 ದಿನಗಳಲ್ಲಿ ಮಾಡಿರುವ ಸಾಧನೆಗಳನ್ನು ಹಂಚಿಕೊಳ್ಳುವ ‘ಜನ್ ಕನೆಕ್ಟ್’ ಬಿಡುಗಡೆ ಮಾಡಿನಿರ್ಮಲಾ ಸೀತಾರಾಮನ್ ಚೆನ್ನೈನಲ್ಲಿ ಮಾತನಾಡಿದರು.
ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗಿದೆ.ಬಸ್, ಟ್ರಕ್ ಮಾರಾಟ ಕುಸಿತಕ್ಕೂ ಇದೇ ಕಾರಣವೇ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.