ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಂಗಳೂರಿನ ಮಧ್ಯಮ ಗಾತ್ರದ ಮೈಂಡ್‌ಟ್ರೀ ಸಂಸ್ಥೆಯ ಅಸ್ತಿತ್ವವನ್ನು ಪ್ರತ್ಯೇಕವಾಗಿಯೇ ಕಾಯ್ದುಕೊಳ್ಳಲಾಗುವುದು ಎಂದು ಲಾರ್ಸನ್ ಆ್ಯಂಡ್ ಟುಬ್ರೊ (ಎಲ್‌ಆ್ಯಂಡ್‌ಟಿ) ತಿಳಿಸಿದೆ.
‘ನಮ್ಮ ತಂತ್ರಜ್ಞಾನ ಸಂಸ್ಥೆಗಳ ವಹಿವಾಟಿನಿಂದ ಮೈಂಡ್‌ಟ್ರೀಯನ್ನು ಪ್ರತ್ಯೇಕವಾಗಿಯೇ ನಿರ್ವಹಿಸಲಾಗುವುದು. ಮೈಂಡ್‌ಟ್ರೀ ಮತ್ತು ಎಲ್‌ಆ್ಯಂಡ್‌ಟಿ ಇನ್ಫೊಟೆಕ್ (ಎಲ್‌ಟಿಐ) ಹಾಗೂ ಎಲ್ಆ್ಯಂಡ್‌ಟಿ ಟೆಕ್ನಾಲಜಿ ಸರ್ವಿಸಸ್ (ಎಲ್‌ಟಿಟಿಎಸ್) ಪ್ರತ್ಯೇಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳ ಮಧ್ಯೆ ನೇರ ಸಂಘರ್ಷ ಏರ್ಪಡುವುದಿಲ್ಲ. ಆದರೆ, ಭವಿಷ್ಯದಲ್ಲಿನ ಸ್ವರೂಪದ ಬಗ್ಗೆ ಊಹೆ ಮಾಡುವುದು ಈ ಹಂತದಲ್ಲಿ ಸಮಂಜಸವಾಗಲಾರದು’ ಎಂದು ಎಲ್‌ಆ್ಯಂಡ್‌ಟಿ ಸಿಇಒ ಎಸ್. ಎನ್. ಸುಬ್ರಮಣಿಯನ್ ಹೇಳಿದ್ದಾರೆ.
‘ಗ್ರಾಹಕರು ಬಳಸುವ ಪ್ಯಾಕೇಜ್ಡ್ ಸರಕು, ಚಿಲ್ಲರೆ, ಪ್ರವಾಸ, ಹೋಟೆಲ್ ಮತ್ತು ಗರಿಷ್ಠ ಮಟ್ಟದ ತಂತ್ರಜ್ಞಾನ ವಲಯಕ್ಕೆ ಮೈಂಡ್‌ಟ್ರೀ ಸೇವೆ ನೀಡುತ್ತಿದೆ. ಬ್ಯಾಂಕಿಂಗ್, ವಿಮೆ, ತೈಲ ಮತ್ತು ಅನಿಲ, ತಯಾರಿಕೆ ವಲಯಗಳಿಗೆ ಎಲ್‌ಟಿಐ ಸೇವೆ ಒದಗಿಸುತ್ತಿದೆ. ಇದರಿಂದ ಒಂದು ಸಂಸ್ಥೆಯು ಇನ್ನೊಂದು ಸಂಸ್ಥೆಯ ಗ್ರಾಹಕರನ್ನು ಸೆಳೆಯುವ ಪ್ರಯತ್ನಕ್ಕೆ ಅವಕಾಶ ಇರುವುದಿಲ್ಲ. ಸಂಸ್ಥೆಗೆ ಸದ್ಯದಲ್ಲಿಯೇ ಹೊಸ ಸಿಇಒ ನೇಮಕ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
ಮೈಂಡ್‌ಟ್ರೀ ಕಂಪನಿಯಲ್ಲಿ ಶೇ 60.06ರಷ್ಟು ಷೇರುಗಳನ್ನು ಖರೀದಿಸಿ ಬಲವಂತದಿಂದ ಸಂಸ್ಥೆಯ ಮೇಲೆ ಹಿಡಿತ ಹೊಂದಿರುವ ಎಲ್‌ಆ್ಯಂಡ್‌ಟಿ, ಈಚೇಗಷ್ಟೇ ಪ್ರವರ್ತಕರ ಸ್ಥಾನ ಪಡೆದುಕೊಂಡಿದೆ. ಸಂಸ್ಥೆಯ ನಿರ್ದೇಶಕ ಮಂಡಳಿಗೆ ತನ್ನ ಕಡೆಯಿಂದ ಮೂವರನ್ನು ನೇಮಕ ಮಾಡಿದೆ. ಈ ನೇಮಕವು ಇದೇ 16ರಿಂದ ಜಾರಿಗೆ ಬರಲಿದೆ.
ಈ ಬೆಳವಣಿಗೆ ಬೆನ್ನಲ್ಲೇ ಮೈಂಡ್‌ಟ್ರೀನ ಸಹ ಸ್ಥಾಪಕ ಮತ್ತು ಅಧ್ಯಕ್ಷ ಕೃಷ್ಣಕುಮಾರ್ ನಟರಾಜನ್, ಉಪಾಧ್ಯಕ್ಷ ಪಾರ್ಥಸಾರಥಿ ಎನ್.ಎಸ್. ಮತ್ತು ಸಿಇಒ ರೊಸ್ಟೋವ್ ರಾವಣನ್ ಅವರು ಇತ್ತೀಚೆಗೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಷೇರುಬೆಲೆ ಕುಸಿತ
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಸಂಸ್ಥೆಯ ಪ್ರತಿ ಷೇರು ಬೆಲೆಶೇ 10.43ರಷ್ಟು ಕಡಿಮೆಯಾಗಿ ₹ 773.95ಕ್ಕೆ ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.