ನವದೆಹಲಿ: ಉದ್ದಿಮೆಗಳು ಪಾಲಿಸಬೇಕಿರುವ ನಿಯಮಗಳ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಕಾನೂನುಗಳ ಪುನರ್ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ನಿಯಮಗಳ ಪಾಲನೆಯ ಹೊರೆಯನ್ನು ತಗ್ಗಿಸುವುದು ಸರ್ಕಾರದ ಆದ್ಯತಾ ಕಾರ್ಯಗಳಲ್ಲಿ ಒಂದು. ಪಾಲನೆ ಮಾಡಬೇಕಿರುವ ನಿಯಮಗಳ ಹೊರೆ ಹೆಚ್ಚಿದೆ. ಇದನ್ನು ನಾವು ತಗ್ಗಿಸಬೇಕಿದೆ. ಎಲ್ಲ ಸಚಿವಾಲಯಗಳೂ ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತ್ತಿವೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಕ್ರಿಮಿನಲ್ ಕ್ರಮ ಜರುಗಿಸಲು ಅವಕಾಶ ಇರುವ ಕಾನೂನುಗಳನ್ನು ಪುನರ್ ಪರಿಶೀಲಿಸಲು ಸಾಧ್ಯವೇ ಎಂಬ ಬಗ್ಗೆ ನಾವು ಅವಲೋಕನ ನಡೆಸುತ್ತಿದ್ದೇವೆ. ಕ್ರಿಮಿನಲ್ ಕ್ರಮ ಜರುಗಿಸಿ ಶಿಕ್ಷೆ ವಿಧಿಸುವುದು ಅಗತ್ಯವೇ, ಅದರ ಬದಲು ಸಿವಿಲ್ ಕ್ರಮ ಜರುಗಿಸಿ ದಂಡವನ್ನು ಮಾತ್ರವೇ ವಿಧಿಸಿದರೆ ಸಾಕೇ ಎಂಬ ನಿಟ್ಟಿನಲ್ಲಿ ಆಲೋಚನೆ ನಡೆಸಿದ್ದೇವೆ’ ಎಂದು ಆ ಅಧಿಕಾರಿ ತಿಳಿಸಿದರು.
ಹೊರೆ ಅನಿಸುವಂತಹ ನಿಯಮಗಳನ್ನು ಗುರುತಿಸುವಂತೆ, ವಾಣಿಜ್ಯೋದ್ಯಮಗಳ ಮೇಲೆ ಆಗಿರುವ ಆ ಹೊರೆಯನ್ನು ತಗ್ಗಿಸಲು ಇರುವ ಮಾರ್ಗ ಹುಡುಕುವಂತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಲಹೆ ನೀಡಲಾಗಿದೆ. ವಿಲೀನ ಮಾಡಬಹುದಾದ ಅಥವಾ ರದ್ದು ಮಾಡಬಹುದಾದ ಕಾಯ್ದೆಗಳನ್ನು ಕೂಡ ಗುರುತಿಸುವಂತೆ ರಾಜ್ಯಗಳಿಗೆ ಮತ್ತು ಸಚಿವಾಲಯಗಳಿಗೆ ಸೂಚಿಸಲಾಗಿದೆ.
ಪರವಾನಗಿ ನವೀಕರಣದ ಪ್ರಕ್ರಿಯೆಯನ್ನು ಇಲ್ಲವಾಗಿಸುವುದು ಅಥವಾ ಪರವಾನಗಿ ಅವಧಿಯನ್ನು ಹೆಚ್ಚಿಸುವುದು, ವಾಣಿಜ್ಯೋದ್ಯಮಗಳು ಸಲ್ಲಿಸಬೇಕಿರುವ ವಿವರಗಳ ಪ್ರಮಾಣ ಕಡಿಮೆ ಮಾಡುವುದು ಸೇರಿದಂತೆ ಹಲವು ಅಂಶಗಳನ್ನು ತೆಗೆಯುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.