ADVERTISEMENT

ಮೊಬೈಲ್ ವಾಲೆಟ್‌ ವಹಿವಾಟು ಸುಲಭ

ಪೃಥ್ವಿರಾಜ್ ಎಂ ಎಚ್
Published 8 ಜನವರಿ 2020, 8:40 IST
Last Updated 8 ಜನವರಿ 2020, 8:40 IST
   
""

ನಗದುರಹಿತ (ಡಿಜಿಟಲ್‌) ವಹಿವಾಟು ನಡೆಸುವುದಕ್ಕೆ ಮೊಬೈಲ್‌ ವಾಲೆಟ್‌ಗಳು ನೆರವಾಗುತ್ತವೆ. ಸ್ಮಾರ್ಟ್‌ಫೋನ್‌ಗಳ ಸಹಾಯದಿಂದ ಬಳಸಬಹುದಾದ ವರ್ಚುವಲ್ ಕರೆನ್ಸಿಯಾಗಿರುವ ಈ ವಾಲೆಟ್‌ ಬಳಕೆಗಳ ಪ್ರಯೋಜನ, ಮುನ್ನೆಚ್ಚರಿಕೆ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.

ಗ್ರಾಹಕರು ತಮಗೆ ಬೇಕಾದ ಅಗತ್ಯ ಸರಕುಗಳನ್ನು ಖರೀದಿಸಲು, ವಿವಿಧ ಬಗೆಯ ಸೇವೆಗಳನ್ನು ಪಡೆಯಲು, ಹಣ ರವಾನಿಸಲು ಮೊಬೈಲ್‌ ವಾಲೆಟ್‌ಗಳು ಬಹುಬಗೆಯಲ್ಲಿ ನೆರವಾಗುತ್ತಿವೆ. ಈ ವಾಲೆಟ್‌ಗಳಲ್ಲಿ ಹಣ ಭರ್ತಿ ಮಾಡಿದ್ದರೆ ಹಲವು ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು. ನಗದುರಹಿತ (ಡಿಜಿಟಲ್‌) ವಹಿವಾಟನ್ನು ಉತ್ತೇಜಿಸುತ್ತಿರುವ ಮೊಬೈಲ್‌ ವಾಲೆಟ್‌ಗಳ ಬಳಕೆ, ಉಪಯೋಗ ಮತ್ತು ಬಳಕೆಯಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ನೋಟುಗಳು, ನಾಣ್ಯಗಳ ಪ್ರಮೇಯವಿಲ್ಲದೇ, ವಹಿವಾಟು ನಡೆಸುವುದಕ್ಕೆ ಮೊಬೈಲ್‌ ವಾಲೆಟ್‌ಗಳು ನೆರವಾಗುತ್ತವೆ. ಸ್ಮಾರ್ಟ್‌ಫೋನ್‌ಗಳ ಸಹಾಯದಿಂದ ಬಳಸಬಹುದಾದ ಈ ವಾಲೆಟ್‌ಗಳನ್ನು ಒಂದು ರೀತಿಯಲ್ಲಿ ವರ್ಚುವಲ್ ಕರೆನ್ಸಿ ಎಂದೂ ಹೇಳಬಹುದು.

ADVERTISEMENT

ಫ್ಲಿಪ್‌ಕಾರ್ಟ್, ಅಮೆಜಾನ್‌ ನಂತಹ ಇ–ಕಾಮರ್ಸ್‌ ತಾಣಗಳು ಮತ್ತು ಆನ್‌ಲೈನ್‌ ಸೇವೆ ಒದಗಿಸುವ ಸಂಸ್ಥೆಗಳಿಂದಾಗಿ ಡಿಜಿಟಲ್‌ ವಹಿವಾಟಿಗೆ ಉತ್ತೇಜನ ದೊರೆತಿದೆ. ಹೀಗಾಗಿ ಹಲವು ಸಂಸ್ಥೆಗಳು ಮೊಬೈಲ್‌ ವಾಲೆಟ್‌ ಸೇವೆಗಳನ್ನು ಪೈಪೋಟಿ ಮೇಲೆ ಒದಗಿಸುತ್ತಿವೆ. ದಿನದ 24 ಗಂಟೆ ಯಾವಾಗ ಬೇಕೆಂದರೂ ಇವುಗಳನ್ನು ಬಳಸಿಕೊಳ್ಳಬಹುದು. ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವುದರಿಂದ ಗ್ರಾಹಕರು ನಿಶ್ಚಿಂತೆಯಿಂದ ವಹಿವಾಟು ನಡೆಸಬಹುದು.

ನಾಲ್ಕು ವಿಧಗಳು

ಮೊಬೈಲ್‌ ವಾಲೆಟ್‌ಗಳ ವಹಿವಾಟು ಪ್ರಕ್ರಿಯೆಗೆ ಅನುಗುಣವಾಗಿ ಓಪನ್‌, ಸೆಮಿ ಓಪನ್‌, ಕ್ಲೋಸ್ಡ್‌ ಹಾಗೂ ಸೆಮಿ ಕ್ಲೋಸ್ಡ್‌ ಎಂದು ನಾಲ್ಕು ವಿಧಗಳಾಗಿ ಇವುಗಳನ್ನು ವಿಂಗಡಿಸಬಹುದು.

ಓಪನ್‌: ಈ ರೀತಿಯ ವಾಲೆಟ್‌ಗಳನ್ನು ಬ್ಯಾಂಕ್‌ಗಳಷ್ಟೇ ನಿರ್ವಹಿಸುತ್ತವೆ. ಇವುಗಳಿಂದ ವಸ್ತುಗಳನ್ನು ಖರೀದಿಸಬಹುದು.

ಸೇವೆ ಪಡೆಯಬಹುದು. ಹಣ ಹಿಂದೆ ಪಡೆಯುವುದಕ್ಕೆ, ವರ್ಗಾವಣೆ ಮಾಡುವುದಕ್ಕೆ ಅವಕಾಶವಿದೆ. ಈ ವಾಲೆಟ್‌ಗಳಲ್ಲಿ ಗರಿಷ್ಠ ₹ 1 ಲಕ್ಷದವರೆಗೆ ಹಣ ಇಟ್ಟುಕೊಳ್ಳಬಹುದು.

ಸೆಮಿ ಓಪನ್‌: ವಸ್ತುಗಳನ್ನು ಖರೀದಿಸುವುದಕ್ಕೆ ಮತ್ತು ಸೇವೆ ಪಡೆಯುವುದಕ್ಕೆ ಇಂತಹ ವಾಲೆಟ್‌ಗಳು ನೆರವಾಗುತ್ತವೆ. ಆದರೆ ನಗದು ಹಿಂಪಡೆಯಲು ಸಾಧ್ಯವಿಲ್ಲ.

ಸೆಮಿ ಕ್ಲೋಸ್ಡ್‌: ಇಂತಹ ವಾಲೆಟ್‌ಗಳನ್ನು ನಿರ್ದಿಷ್ಟ ಕಂಪನಿಗಳೇ ನಿರ್ವಹಿಸುತ್ತವೆ. ಇದರಿಂದ ಹಲವು ಬಗೆಯ ಶುಲ್ಕಗಳನ್ನು ಪಾವತಿಸಬಹುದು. ಈ ವಾಲೆಟ್‌ ನಿರ್ವಹಿಸುವ ಕಂಪನಿಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕೆಲಸ ಮಾಡುತ್ತದೆ.

ಕ್ಲೋಸ್ಡ್‌: ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳೇ ಕ್ಲೋಸ್ಟ್ ವಾಲೆಟ್‌ಗಳನ್ನು ನಿರ್ವಹಿಸುತ್ತವೆ. ಇದರಿಂದ ಹಣ ಪಡೆಯಲು ಸಾಧ್ಯವಿಲ್ಲ. ಹಣ ವರ್ಗಾವಣೆ ಮಾಡುವುದಕ್ಕೆ, ಕೆಲವು ನಿರ್ದಿಷ್ಟ ಸೇವೆಗಳನ್ನು ಪಡೆಯುವುದಕ್ಕೆ ಮತ್ತು ಸರಕುಗಳನ್ನು ಖರೀದಿಸುವುದಕ್ಕೆ ನೆರವಾಗುತ್ತವೆ.

ವಾಲೆಟ್‌ಗಳ ಉಪಯೋಗಗಳು

*ಇತರರಿಗೆ ಹಣವನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು

*ಕೆಲವು ಸೇವೆಗಳಿಗೆ ಅಥವಾ ವಹಿವಾಟುಗಳಿಗೆ ಕ್ಯಾಷ್‌ಬ್ಯಾಕ್‌ ಕೊಡುಗೆಗಳು ಸಿಗುತ್ತವೆ. ಕೆಲವೊಮ್ಮೆ ರಿಯಾಯ್ತಿಗಳೂ ಇರುತ್ತವೆ.

*ಆನ್‌ಲೈನ್‌ ವಹಿವಾಟಿಗೆ ಹೆಚ್ಚು ಸೂಕ್ತ

*ಬಸ್‌, ರೈಲು, ವಿಮಾನ ಟಿಕೆಟ್ ಕಾಯ್ದಿರಿಸಲು ನೆರವು

*ಟ್ಯಾಕ್ಸಿ ಸೇವೆಗಳಿಗೆ ಬಾಡಿಗೆ ಪಾವತಿ

*ಫೋನ್‌ಬಿಲ್, ಕರೆಂಟ್‌ ಬಿಲ್‌, ನೀರಿನ ಬಿಲ್‌, ಕೇಬಲ್‌ ಶುಲ್ಕ ಸೇರಿದಂತೆ ಹಲವು ಬಿಲ್‌ಗಳ ಪಾವತಿಗೆ ಅನುಕೂಲ

*ಸಿಮ್‌ಕಾರ್ಡ್‌ಗಳಿಗೆ ರೀಚಾರ್ಜ್‌

*ಮಳಿಗೆ ಮತ್ತು ಹೋಟೆಲ್‌ಗಳಲ್ಲಿ ಸುಲಭ ಹಣ ಪಾವತಿ

*ವಾಹನಗಳಿಗೆ ಇಂಧನ ತುಂಬಿಸಲು

*ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಒಂದೇ ವಾಲೆಟ್‌ ಮೂಲಕ ಸುಲಭ ನಿರ್ವಹಣೆ

ಜನಪ್ರಿಯ ವಾಲೆಟ್‌ಗಳು

ಪೇಟಿಎಂ

ದೇಶದಲ್ಲಿ ಹೆಚ್ಚು ಜನ ಬಳಸುತ್ತಿರುವ ವಾಲೆಟ್ ಇದು. ಇದರಿಂದ ಬಹುತೇಕ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಹಲವು ಸುರಕ್ಷತಾ ಕ್ರಮಗಳನ್ನೂ ಕಂಪನಿಯು ಅಳವಡಿಸಿದೆ. ಹಲವು ಸಂಸ್ಥೆಗಳೊಂದಿಗೆ ಕೈ ಜೋಡಿಸಿದ್ದು, ಸುಲಭ ವಹಿವಾಟಿಗೆ ನೆರವಾಗುತ್ತಿದೆ. ಶೇ 10ರಿಂದ 70ರ ವರೆಗೆ ಕ್ಯಾಷ್‌ಬ್ಯಾಕ್, ರಿಯಾಯ್ತಿ ನೀಡುತ್ತಿದೆ.

ಫೋನ್‌ ಪೇ

ಪೇಟಿಎಂನಂತೆ ಇದರಲ್ಲೂ ಹಲವು ಸೇವೆಗಳನ್ನು ಪಡೆಯಲು ಸಾಧ್ಯವಿದೆ. ಫ್ಲಿಪ್‌ಕಾರ್ಟ್ ಸಂಸ್ಥೆ ಇದನ್ನು ಖರೀದಿಸಿ, ತನ್ನ ಅಧಿಕೃತ ವಾಲೆಟ್ ಆಗಿ ನಿರ್ವಹಿಸುತ್ತಿದೆ. ಚಿನ್ನ ಖರೀದಿ, ಜೀವಾ ವಿಮೆ ಪಾಲಸಿ ಬಿಲ್ ಪಾವತಿ, ತೆರಿಗೆ ಪಾವತಿ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತಿದೆ.

ಫ್ರೀಚಾರ್ಜ್‌

ಮೂರು ವರ್ಷಗಳಲ್ಲಿ ಫ್ರೀಚಾರ್ಜ್‌ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜನಪ್ರಿಯ ವಾಲೆಟ್‌ಗಳಲ್ಲಿ ಇದು ಕೂಡ ಒಂದು. ಹೆಚ್ಚಿನ ಪ್ರಮಾಣದಲ್ಲಿ ಕ್ಯಾಷ್‌ಬ್ಯಾಕ್ ಒದಗಿಸುತ್ತಲೇ ಜನಪ್ರಿಯತೆ ಪಡೆದುಕೊಂಡಿದೆ. ಪೇಟಿಎಂ, ಫೋನ್‌ಪೇಗಳಂತೆ ಇದರ ಮೂಲಕವೂ ಹಲವು ಸೇವೆಗಳನ್ನು ಪಡೆಯಬಹುದು. ಕೂಪನ್‌ಕೋಡ್‌ಗಳನ್ನೂ ಇದರ ಮೂಲಕ ಬಳಸಿಕೊಳ್ಳಬಹುದು.

ಮೊಬಿಕ್ವಿಕ್‌

ಹೆಚ್ಚು ಜನಪ್ರಿಯವಾಗುತ್ತಿರುವ ವಾಲೆಟ್‌ಗಳಲ್ಲಿ ಮೊಬಿಕ್ವಿಕ್ ಕೂಡ ಇದೆ. ನೋಟು ರದ್ಧತಿಯ ನಂತರ ಇದರ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಯಿತು. ಈ ಸಂಸ್ಥೆ ದೇಶದ 12 ವಿದ್ಯುತ್‌ ಪೂರೈಕೆ ಮಂಡಳಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವುದರಿಂದ ಹ್ಯಾಕ್‌ ಮಾಡುವುದು ಕಷ್ಟ ಎಂದು ಸಂಸ್ಥೆ ಹೇಳಿದೆ. ಶೇ 30ರಿಂದ 50ರಷ್ಟು ಕ್ಯಾಷ್‌ಬ್ಯಾಕ್ ಕೂಡ ನೀಡುತ್ತದೆ. ಸೂಪರ್‌ಕ್ಯಾಷ್‌ ಸಿಸ್ಟಂ ಕೂಡ ಜಾರಿಗೆ ತಂದಿದ್ದು ಸುಲಭವಾಗಿ ರಿಯಾಯ್ತಿ ಪಡೆಯಲು ನೆರವಾಗುತ್ತಿದೆ.

ಗೂಗಲ್ ಪೇ

ಗೂಗಲ್‌ ಪೇ ಈಗ ಗೂಗಲ್ ತೇಜ್ ಆಗಿ ಬದಲಾಗಿದೆ. ಇದು ಪೂರ್ಣಪ್ರಮಾಣದ ಮೊಬೈಲ್ ವಾಲೆಟ್ ಅಲ್ಲದಿದ್ದರೂ ವಾಲೆಟ್‌ಗಳು ನೀಡುವ ಹಲವು ಸೇವೆಗಳನ್ನು ಒದಗಿಸುತ್ತಿದೆ. ನಾವು ಸೇವೆ ಪಡೆಯುತ್ತಿರುವ ಬ್ಯಾಂಕ್‌ ಖ್ಯಾತೆಯನ್ನೇ ವಾಲೆಟ್‌ ರೀತಿ ಬಳಸಿಕೊಳ್ಳಲು ನೆರವಾಗುತ್ತದೆ. ಯುಪಿಐ ಆಧಾರಿತ ಸೇವೆ ಒದಗಿಸುವ ಎಲ್ಲ ಬ್ಯಾಂಕ್‌ಗಳೊಂದಿಗೆ ಇದರ ಮೂಲಕ ವಹಿವಾಟು ನಡೆಸಬಹುದು.

ಎಚ್ಚರವಿರಲಿ

ಬ್ಯಾಂಕ್‌ ಖಾತೆಗಳಿಗೆ ಹೆಚ್ಚು ರಕ್ಷಣೆ ಒದಗಿಸುತ್ತಿರುವುದರಿಂದ ಕನ್ನ ಹಾಕುವವರು ವಾಲೆಟ್‌ಗಳ ಕಡೆಗೆ ದೃಷ್ಟಿ ಹಾಯಿಸಿದ್ದಾರೆ. ಹೀಗಾಗಿ ಜಾಗರೂಕರಾಗಿರುವುದು ಉತ್ತಮ.

ಮೊಬೈಲ್‌ ವಾಲೆಟ್‌ಗಳಿಂದ ಹಣ ಪಾವತಿಸಬೇಕೆಂದರೆ, ಸ್ಕ್ಯಾನ್‌ ಮಾಡಬೇಕು. ಎಲ್ಲೆಂದರಲ್ಲಿ ಸ್ಕ್ಯಾನ್ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿ ಸ್ಕ್ಯಾನ್ ಮಾಡುವುದು ಒಳ್ಳೆಯದು.

ಬ್ಯಾಂಕ್‌ ಖಾತೆಯಿಂದ ನೇರವಾಗಿ ಹಣ ಕಡಿತವಾಗುವಂತೆ ವ್ಯವಸ್ಥೆ ಹೊಂದಿರುವ ವಾಲೆಟ್‌ಗಳ ಬಳಸುವಾಗ ಎಚ್ಚದಿಂದ ವಹಿವಾಟು ನಡೆಸಿ. ನಿರ್ದಿಷ್ಟ ಮೊತ್ತದವರೆಗೆ ಹಣ ಜಮೆ ಮಾಡಿ ಬಳಸಲು ಸಾಧ್ಯವಿರುವ ವಾಲೆಟ್‌ಗಳ ಬಳಕೆ ಉತ್ತಮ.

ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಮುನ್ನ ಅಧಿಕೃತ ಆ್ಯಪ್‌ ಎಂಬುದನ್ನು ಪರಿಶೀಲಿಸಿ. ಅತ್ಯಂತ ಕ್ಲಿಷ್ಟವಾದ ಪಿನ್‌,ಪಾಸ್‌ವರ್ಡ್‌ ಬಳಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.