ADVERTISEMENT

3 ಬ್ಯಾಂಕ್‌, 8 ಕಂಪನಿ ರೇಟಿಂಗ್ಸ್‌ ಇಳಿಕೆ

ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವಿಸ್‌ ಮುನ್ನೋಟ

ಪಿಟಿಐ
Published 3 ಜೂನ್ 2020, 2:33 IST
Last Updated 3 ಜೂನ್ 2020, 2:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸಾಲ ಮರುಪಾವತಿ ಸಾಮರ್ಥ್ಯ ತಗ್ಗಿಸಿದ ಮರು ದಿನವೇ, ಅಂತರರಾಷ್ಟ್ರೀಯ ರೇಟಿಂಗ್‌ ಸಂಸ್ಥೆಯಾಗಿರುವ ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವಿಸ್‌, ಮೂರು ಬ್ಯಾಂಕ್‌ ಮತ್ತು ಎಂಟು ಹಣಕಾಸುಯೇತರ ಕಂಪನಿಗಳ ರೇಟಿಂಗ್ಸ್‌ ಅನ್ನೂ ತಗ್ಗಿಸಿದೆ.

ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌, ಆಮದು ಮತ್ತು ರಫ್ತು (ಎಕ್ಸಿಂ) ಬ್ಯಾಂಕ್‌ ಮತ್ತು ಹಣಕಾಸುಯೇತರ ಕಂಪನಿಗಳಾದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ, ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ಆಯಿಲ್ ಇಂಡಿಯಾ, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ಪೆಟ್ರೊನೆಟ್‌ ಎಲ್‌ಎನ್‌ಜಿ, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌) ಮತ್ತು ಇನ್ಫೊಸಿಸ್‌ನ ರೇಟಿಂಗ್ಸ್‌ ತಗ್ಗಿಸಲಾಗಿದೆ. ಇವುಗಳ ರೇಟಿಂಗ್ಸ್‌ ಮುನ್ನೋಟವು ನಕಾರಾತ್ಮಕವಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುನ್ನೋಟವನ್ನು ನಕಾರಾತ್ಮಕದಿಂದ ಸ್ಥಿರತೆಗೆ ಪರಿಷ್ಕರಿಸಿದೆ.

ಎಚ್‌ಡಿಎಫ್‌ಸಿಬ್ಯಾಂಕ್‌, ಎಕ್ಸಿಂ ಇಂಡಿಯಾ ಮತ್ತು ಎಸ್‌ಬಿಐನ ದೀರ್ಘಾವಧಿ ಸ್ಥಳೀಯ ಮತ್ತು ವಿದೇಶಿ ಕರೆನ್ಸಿ ಠೇವಣಿ ರೇಟಿಂಗ್ಸ್‌ ಅನ್ನು Baa2 ನಿಂದ Baa3ಗೆ ತಗ್ಗಿಸಿದೆ. ಇವುಗಳ ರೇಟಿಂಗ್‌ ಮುನ್ನೋಟವು ಋಣಾತ್ಮಕವಾಗಿದೆ.

ADVERTISEMENT

ಸೋಮವಾರವಷ್ಟೇ ಮೂಡೀಸ್‌, ದೇಶದ ಸಾಲ ಮರುಪಾವತಿ ಸಾಮರ್ಥ್ಯವನ್ನು 22 ವರ್ಷಗಳಲ್ಲಿ ಮೊದಲ ಬಾರಿಗೆ ಅತ್ಯಂತ ಕಡಿಮೆ ಹೂಡಿಕೆ ಶ್ರೇಣಿಯಾಗಿರುವ 'Baa3'ಗೆ ತಗ್ಗಿಸಿತ್ತು. ಇದು ‘ಜಂಕ್‌ ಸ್ಟೇಟಸ್‌’ಗಿಂತ ಒಂದು ಹಂತ ಮೇಲಿದೆಯಷ್ಟೆ.

ಏನಿದು ಕ್ರೆಡಿಟ್‌ ರೇಟಿಂಗ್‌?
ಕ್ರೆಡಿಟ್‌ ರೇಟಿಂಗ್‌ ಎನ್ನುವುದು ಸಾಲಗಾರರ ಇಲ್ಲವೆ ದೇಶವೊಂದರ ಸಾಲ ಮರುಪಾವತಿ ಸಾಮರ್ಥ್ಯದ ಪ್ರಮಾಣೀಕರಿಸಿದ ಅಂದಾಜು ಆಗಿರುತ್ತದೆ. ರೇಟಿಂಗ್‌ ಕಂಪನಿಗಳು ದೇಶದ ಸಾಲ ಮರುಪಾವತಿ ಸಾಮರ್ಥ್ಯವನ್ನು ಅಂದಾಜಿಸುತ್ತವೆ. ಹೂಡಿಕೆದಾರರು ದೇಶವೊಂದರಲ್ಲಿ ಹೂಡಿಕೆ ಮಾಡಿದ ಹಣ ವಾಪಸ್‌ ಬರುವ (ಸಾಲ ಮರುಪಾವತಿ ಸಾಮರ್ಥ್ಯ) ಕುರಿತು ರೇಟಿಂಗ್‌ಗಳು ಒಳನೋಟ ನೀಡುತ್ತವೆ.

ರೇಟಿಂಗ್‌ ಪರಿಭಾಷೆಯಲ್ಲಿ ‘ಜಂಕ್‌ ಸ್ಟೇಟಸ್‌‘ ಎಂದರೆ ಸಾಲವನ್ನು ಮರು ಪಾವತಿಸಲು ಸರ್ಕಾರದ ಬಳಿ ಸಾಕಷ್ಟು ಹಣ ಇಲ್ಲದಿರುವಂತಹ ಪರಿಸ್ಥಿತಿ. ಭಾರತದ ರೇಟಿಂಗ್‌, ಜಂಕ್‌ ಸ್ಥಾನಮಾನಕ್ಕಿಂತ ಒಂದು ಹಂತ ಮೇಲಿದೆಯಷ್ಟೆ.

ಭಾರತದ ರೇಟಿಂಗ್‌ ‘ಬಿಎಎ3’ಗೆ ಕಡಿತ
ಭಾರತದ ರೇಟಿಂಗ್‌ ಅನ್ನು ಮೂಡಿಸ್‌, ‘ಬಿಎಎ2’ನಿಂದ ‘ಬಿಎಎ3’ಗೆ ತಗ್ಗಿಸಿದೆ. ಮಂದಗತಿಯ ಆರ್ಥಿಕ ಪ್ರಗತಿ ಮತ್ತು ವಿತ್ತೀಯ ಕೊರತೆ ಹೆಚ್ಚುತ್ತಿರುವುದಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಭಾರಿ ಸವಾಲುಗಳು ಎದುರಾಗಿವೆ. ಈ ಕಾರಣಕ್ಕೆ ಕೇಂದ್ರ ಸರ್ಕಾರದ ಸ್ಥಳೀಯ ಮತ್ತು ವಿದೇಶಿ ಕರೆನ್ಸಿಗಳ ರೇಟಿಂಗ್‌ ತಗ್ಗಿಸಲಾಗಿದೆ. ಆರ್ಥಿಕ ಪ್ರಗತಿಯ ಮುನ್ನೋಟ ಋಣಾತ್ಮಕವಾಗಿರಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.