ನವದೆಹಲಿ:ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯ ಮೌಲ್ಯಮಾಪನ ಸಂಸ್ಥೆಯಾದ ಮೂಡೀಸ್ ಭಾರತದ ಆರ್ಥಿಕ ವೃದ್ಧಿ ದರ ಕುರಿತು ನೀಡಿದ್ದ ರೇಟಿಂಗ್ ಅನ್ನು 'ಸ್ಥಿರ'ದಿಂದ 'ನಕಾರಾತ್ಮಕ‘ಕ್ಕೆ ಬದಲಿಸಿದೆ. ದೇಶದ ಆರ್ಥಿಕ ಬೆಳವಣಿಗೆ ಹಿಂದೆ ಅಂದಾಜಿಸಿದ ಪ್ರಮಾಣಕ್ಕಿಂತಲೂ ಕಡಿಮೆ ಇರಲಿದೆ ಎಂಬುದನ್ನು ಮುನ್ನೋಟ ವರದಿಬಿಂಬಿಸುತ್ತಿದೆ.
ಆರ್ಥಿಕತೆ ಕುಂಠಿತವನ್ನು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ಹಾಗೂ ನಿಯಮಗಳು ಸಫಲವಾಗಿಲ್ಲ, ಇದರಿಂದಾಗಿ ಸಾಲದ ಹೊರೆ ಹೆಚ್ಚಲಿದೆ ಎಂದು ಮೂಡೀಸ್ ರೇಟಿಂಗ್ ಏಜೆನ್ಸಿ ಹೇಳಿದೆ.ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 5.0ರಷ್ಟು ಮಾತ್ರ ಇರಲಿದೆ. ಜಾಗತಿಕ ವಾಣಿಜ್ಯ ಸಂಘರ್ಷ ಹಾಗೂ ಗ್ರಾಹಕರ ಬೇಡಿಕೆ ಕುಸಿತದ ಕಾರಣಗಳಿಂದಾಗಿ ಈ ಅವಧಿ ಆರ್ಥಿಕ ಬೆಳವಣಿಗೆಗೆ ಅತ್ಯಂತ ದುರ್ಬಲವಾಗಿದೆ ಎಂದಿದೆ.
'ಭಾರತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ. ಆರ್ಥಿಕತೆಯ ಮೂಲ ದೃಢವಾಗಿದ್ದು, ಹಣದುಬ್ಬರದ ಮೇಲೆ ನಿಗಾವಹಿಸಲಾಗಿದೆ' ಎಂದು ಹಣಕಾಸು ಸಚಿವಾಲಯ ಮೂಡಿಸ್ ರೇಟಿಂಗ್ ಕುರಿತು ಪ್ರತಿಕ್ರಿಯಿಸಿದೆ.
2019–20ರಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 5.8ರಷ್ಟು ಇರಲಿದೆ ಎಂದು ಮೂಡೀಸ್ ಅಕ್ಟೋಬರ್‌ನಲ್ಲಿ ಅಂದಾಜಿಸಿತ್ತು. ಅದಕ್ಕೂ ಮೊದಲುಶೇ 6.2ರಷ್ಟು ಇರಲಿದೆ ಎಂದಿತ್ತು. ಆದರೆ, 2017ರಲ್ಲಿ ಭಾರತಕ್ಕೆ ನೀಡಿದ್ದ ‘ಬಿಎಎ2’ ರೇಟಿಂಗ್ ಅನ್ನು ಮೂಡೀಸ್ ಮುಂದುವರಿಸಿದೆ.2004ರಲ್ಲಿ ಭಾರತಕ್ಕೆ ‘ಬಿಎಎ3’ ರೇಟಿಂಗ್ ನೀಡಿತ್ತು.
ಏನಿದು ‘ಬಿಎಎ2’ ರೇಟಿಂಗ್?
‘ಮೂಡೀಸ್’ ಜಾಗತಿಕ ಅರ್ಥವ್ಯವಸ್ಥೆಯ ಆಧಾರದ ಮೇಲೆ ವಿವಿಧ ರಾಷ್ಟ್ರಗಳಿಗೆ ರೇಟಿಂಗ್ ನೀಡುತ್ತದೆ. ‘ಬಿಎಎ2’ ರೇಟಿಂಗ್ ಮಧ್ಯಮ ಪ್ರಮಾಣದ ಆರ್ಥಿಕ ಅಭಿವೃದ್ಧಿಯನ್ನು ಸೂಚಿಸುತ್ತದೆ. ‘ಎಎಎ’ ಮುಂದುವರಿದ ಅರ್ಥ ವ್ಯವಸ್ಥೆಯ ಅತ್ಯುನ್ನತ ರೇಟಿಂಗ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.