ನವದೆಹಲಿ: ಭಾರತದ ಆರ್ಥಿಕತೆಯು ಜೂನ್ ತ್ರೈಮಾಸಿಕದಲ್ಲಿ ಶೇಕಡ 6ರಿಂದ ಶೇ 6.3ರ ಮಟ್ಟದಲ್ಲಿ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಮೂಡೀಸ್ ಇನ್‌ವೆಸ್ಟರ್ಸ್ ಸರ್ವಿಸಸ್ ಭಾನುವಾರ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ವರಮಾನವು ನಿರೀಕ್ಷೆಗಿಂತಲೂ ಕಡಿಮೆ ಆಗಿ, ಅದರಿಂದಾಗಿ ವಿತ್ತೀಯ ಕೊರತೆಯು ಹೆಚ್ಚಾಗುವ ಆತಂಕವನ್ನು ಅದು ವ್ಯಕ್ತಪಡಿಸಿದೆ.
ಆರ್ಥಿಕ ಬೆಳವಣಿಗೆಯ ಕುರಿತು ಮೂಡೀಸ್ ಮಾಡಿರುವ ಅಂದಾಜು ಆರ್‌ಬಿಐನ ಮಾಡಿರುವುದಕ್ಕಿಂತಲೂ ಕಡಿಮೆ ಇದೆ. ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ 8ರಷ್ಟು ಬೆಳವಣಿಗೆ ಕಾಣಲಿದೆ ಎಂದು ಆರ್‌ಬಿಐ ಕಳೆದ ವಾರ ಅಂದಾಜು ಮಾಡಿದೆ.
2022–23ನೇ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ 6.1ರಷ್ಟು ಬೆಳವಣಿಗೆ ಕಂಡಿತ್ತು.
ಹಣದುಬ್ಬರವು ಇಳಿಮುಖ ಆಗಿರುವುದರಿಂದ ಕುಟುಂಬಗಳ ಮಟ್ಟದಲ್ಲಿ ಖರೀದಿ ಸಾಮರ್ಥ್ಯದಲ್ಲಿ ಸುಧಾರಣೆ ಕಾಣುವ ಸಾಧ್ಯತೆ ಇದೆ. ಆದರೆ, ಬಡ್ಡಿದರವು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಬಂಡವಾಳ ಹೂಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮೂಡೀಸ್‌ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಜೀನ್ ಫಾಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.