ನವದೆಹಲಿ: 2024–25ನೇ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ.
ಆಯಾ ವರ್ಷದ ರಿಟರ್ನ್ಸ್‌ಗಳನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139(1)ರ ಅನ್ವಯ ಈ ಅವಧಿಯೊಳಗೆ ಸಲ್ಲಿಸಬೇಕಿದೆ. ಈ ಗಡುವು ಮೀರಿ ರಿಟರ್ನ್ಸ್ ಸಲ್ಲಿಸುವುದಿದ್ದರೆ ₹5,000 ದಂಡ ಪಾವತಿಸಬೇಕಾಗುತ್ತದೆ.
ಇಲ್ಲಿಯವರೆಗೆ ಇ–ಪೋರ್ಟಲ್‌ನಲ್ಲಿ 5 ಕೋಟಿಗೂ ಹೆಚ್ಚು ತೆರಿಗೆದಾರರು ರಿಟರ್ನ್ಸ್ ಸಲ್ಲಿಸಿದ್ದಾರೆ. ಕಳೆದ ಮೌಲ್ಯಮಾಪನ ವರ್ಷಕ್ಕೆ ಹೋಲಿಸಿದರೆ ರಿಟರ್ನ್ಸ್ ಸಲ್ಲಿಕೆಯಲ್ಲಿ ಶೇ 8ರಷ್ಟು ಏರಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಶನಿವಾರ ‘ಎಕ್ಸ್’ನಲ್ಲಿ ತಿಳಿಸಿದೆ.
ಶುಕ್ರವಾರ ಒಂದೇ ದಿನ 28 ಲಕ್ಷ ತೆರಿಗೆದಾರರು ರಿಟರ್ನ್ಸ್ ಸಲ್ಲಿಸಿದ್ದಾರೆ.
ಆದಾಯ ತೆರಿಗೆ ಪಾವತಿಗೆ ಬಳಸುವ ಐಟಿ ಪೋರ್ಟಲ್ ಅನ್ನು ಇನ್ಫೊಸಿಸ್ ಕಂಪನಿಯು ನಿರ್ವಹಣೆ ಮಾಡುತ್ತದೆ. ತೆರಿಗೆದಾರರಿಗೆ ಯಾವುದೇ ತಾಂತ್ರಿಕ ಸಮಸ್ಯೆಯಾಗದಂತೆ ಮುಂಜಾಗ್ರತೆವಹಿಸುವಂತೆ ಕೇಂದ್ರವು ಕಂಪನಿಗೆ ಸೂಚಿಸಿದೆ. ಇ-ಫೈಲಿಂಗ್‌ನ ಗರಿಷ್ಠ ಅವಧಿಯಲ್ಲಿ ನಿರಂತರವಾಗಿ ಸೇವೆ ಒದಗಿಸುವುದಾಗಿ ಕಂಪನಿಯು ಭರವಸೆ ನೀಡಿದೆ.
‘ಇಲಾಖೆಯೊಂದಿಗೆ ಇನ್ಫೊಸಿಸ್ ತಾಂತ್ರಿಕ ಸಹಭಾಗಿತ್ವ ಹೊಂದಿದ್ದು, ಇ–ಫೈಲಿಂಗ್ ಪೋರ್ಟಲ್‌ನ ನಿರ್ವಹಣೆ ಮಾಡುತ್ತಿದೆ. 2023–24ನೇ ಮೌಲ್ಯಮಾಪನ ವರ್ಷದಲ್ಲಿ 8.61 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದ್ದವು’ ಎಂದು ಇಲಾಖೆಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.