ನವದೆಹಲಿ: ಮದರ್ ಡೇರಿ ‘ಧಾರಾ’ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡುವ ಅಡುಗೆ ಎಣ್ಣೆಗಳ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್‌ಪಿ) ಪ್ರತಿ ಲೀಟರ್‌ಗೆ ₹ 15ರಿಂದ ₹ 20ರವರೆಗೆ ಕಡಿತ ಮಾಡಿದೆ. ಈ ಇಳಿಕೆಯು ತಕ್ಷಣದಿಂದಲೇ ಜಾರಿಗೆ ಬರುತ್ತಿದೆ. ಅಡುಗೆ ಎಣ್ಣೆಗಳ ಬೆಲೆಯು ಜಾಗತಿಕ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿರುವ ಕಾರಣ, ದೇಶಿ ಮಾರುಕಟ್ಟೆಯಲ್ಲಿಯೂ ಬೆಲೆ ಇಳಿಕೆ ಮಾಡಲಾಗಿದೆ.
ಪರಿಷ್ಕೃತ ಎಂಆರ್‌ಪಿ ಇರುವ ಅಡುಗೆ ಎಣ್ಣೆಗಳು ಮುಂದಿನ ವಾರ ಮಾರುಕಟ್ಟೆಗೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ. ‘ಸೊಯಾ ಎಣ್ಣೆ, ರೈಸ್‌ಬ್ರಾನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಶೇಂಗಾ ಎಣ್ಣೆಯ ಬೆಲೆಯನ್ನು ಇಳಿಕೆ ಮಾಡಲಾಗುತ್ತಿದೆ’ ಎಂದು ಮದರ್ ಡೇರಿ ವಕ್ತಾರರು ತಿಳಿಸಿದ್ದಾರೆ.
ಧಾರಾ ರಿಫೈನ್ಡ್ ಸೋಯಾ ಎಣ್ಣೆಯ ಎಂಆರ್‌ಪಿ (1 ಲೀಟರ್ ಪೊಟ್ಟಣ) ₹170 ಇದ್ದಿದ್ದು, ₹150ಕ್ಕೆ ಇಳಿಕೆಯಾಗಿದೆ. ಧಾರಾ ರಿಫೈನ್ಡ್ ರೈಸ್‌ಬ್ರಾನ್ ಎಣ್ಣೆಯ ಎಂಆರ್‌ಪಿ ₹190 ಇದ್ದಿದ್ದು ₹170ಕ್ಕೆ ಇಳಿಕೆಯಾಗಿದೆ.
ಧಾರಾ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ಬೆಲೆಯು ₹175 ಇದ್ದಿದ್ದು ₹160ಕ್ಕೆ ಇಳಿಕೆ ಆಗಿದೆ. ಧಾರಾ ಶೇಂಗಾ ಎಣ್ಣೆಯ ಎಂಆರ್‌ಪಿ ₹255 ಇದ್ದಿದ್ದು ₹240ಕ್ಕೆ ಬಂದಿದೆ. ಅಡುಗೆ ಎಣ್ಣೆಗಳ ಎಂಆರ್‌ಪಿ ಇಳಿಕೆ ಮಾಡುವಂತೆ ಸಾಲ್ವೆಂಟ್ ಎಕ್ಸ್‌ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಇಎ) ತನ್ನ ಸದಸ್ಯರಿಗೆ ಸಲಹೆ ನೀಡಿತ್ತು.
‘ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯು ದೇಶದಲ್ಲಿ ಅಡುಗೆ ಎಣ್ಣೆ ಬೆಲೆಯನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆಯು ಆರು ತಿಂಗಳಲ್ಲಿ ತೀವ್ರ ಕುಸಿತ ಕಂಡಿದೆ. ಶೇಂಗಾ, ಸೋಯಾ ಮತ್ತು ಸಾಸಿವೆ ಬೆಳೆ ಹೆಚ್ಚಾಗಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆಯು ಇಳಿಕೆಯಾಗಿಲ್ಲ’ ಎಂದು ಎಸ್‌ಇಎ ಹೇಳಿತ್ತು.
‘ಬಹುತೇಕ ಬ್ರ್ಯಾಂಡ್‌ಗಳು ಎಂಆರ್‌ಪಿಯನ್ನು ತಗ್ಗಿಸಿದ್ದರೂ, ತಗ್ಗಿಸಿರುವ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗೆ ಅನುಗುಣವಾಗಿ ಇಲ್ಲ’ ಎಂದು ಕೂಡ ಎಸ್‌ಇಎ ಹೇಳಿತ್ತು. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು, ಅಡುಗೆ ಎಣ್ಣೆಗಳ ಬೆಲೆ ಇಳಿಕೆ ಮಾಡಿ, ಗ್ರಾಹಕರಿಗೆ ಅನುಕೂಲ ಕಲ್ಪಿಸುವಂತೆ ಸದಸ್ಯರಿಗೆ ಸೂಚಿಸಬೇಕು ಎಂದು ಎಸ್‌ಇಎಗೆ ಸಲಹೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.