ನವದೆಹಲಿ: ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಈ ಬೇಸಿಗೆಯಲ್ಲಿ 30 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮದರ್ ಡೇರಿ ನಿರ್ಧರಿಸಿದೆ.
ಕಳೆದ ವರ್ಷದ ಬೇಸಿಗೆ ಅವಧಿಗೆ ಹೋಲಿಸಿದರೆ ಈ ಬಾರಿ ಡೇರಿಯಲ್ಲಿ ತಯಾರಾಗುವ ಉತ್ಪನ್ನಗಳಿಗೆ ಶೇ 25ರಿಂದ ಶೇ 30ರಷ್ಟು ಬೇಡಿಕೆ ಹೆಚ್ಚುವ ಸಾಧ್ಯತೆಯಿದೆ ಎಂದು ಹೇಳಿದೆ.
‘ಬೇಸಿಗೆಯಲ್ಲಿ ಹೈನು ಉತ್ಪನ್ನಗಳ ವಹಿವಾಟು ಹೆಚ್ಚಿರುತ್ತದೆ. ಅದರಲ್ಲೂ ಐಸ್‌ಕ್ರೀಂ, ಮೊಸರು ಹಾಗೂ ಪಾನೀಯಗಳು ಹೆಚ್ಚು ಮಾರಾಟವಾಗುತ್ತವೆ’ ಎಂದು ಮದರ್ ಡೇರಿಯ ಹಣ್ಣುಗಳು ಮತ್ತು ತರಕಾರಿಗಳ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಬಂದ್ಲೀಷ್ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಈ ಬಾರಿ ಸಾಮಾನ್ಯ ಉಷ್ಣಾಂಶವು ಹೆಚ್ಚಿರುತ್ತದೆ. ಜೊತೆಗೆ, ಈ ವರ್ಷದ ಬೇಸಿಗೆ ಋತುವು ಹೆಚ್ಚು ತಾಪಮಾನದಿಂದ ಕೂಡಿರುತ್ತದೆ ಎಂದು ಹೇಳಿದೆ. ಹಾಗಾಗಿ, ಈ ಮೂರು ವಿಭಾಗಗಳಲ್ಲಿ ತಯಾರಾಗುವ ಉತ್ಪನ್ನಗಳಿಗೆ ಬೇಡಿಕೆ ದುಪ್ಪಟ್ಟಾಗುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.
ಈಗಾಗಲೇ, ಕಳೆದ ವರ್ಷಕ್ಕೆ ಹೋಲಿಸಿದರೆ ಐಸ್‌ಕ್ರೀಂ ಮಾರಾಟದಲ್ಲಿ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಸಲು ಮದರ್ ಡೇರಿಯು ಈಗಾಗಲೇ ₹50 ಕೋಟಿ ಹೂಡಿಕೆ ಮಾಡಿದೆ ಎಂದು ಹೇಳಿದ್ದಾರೆ.
‘ಪ್ರಸ್ತುತ ಡೇರಿಯು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಹಾಗಾಗಿ, ನಮ್ಮ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಪೈಕಿ 20 ಬಗೆಯ ಹೊಸ ಐಸ್‌ಕ್ರೀಂಗಳು, ಕೊಬ್ಬಿಲ್ಲದ ಗ್ರೀಕ್ ಯೊಗಾರ್ಟ್ ಹಾಗೂ ಇತರೆ ಉತ್ಪನ್ನಗಳು ಈ ಪಟ್ಟಿಯಲ್ಲಿವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.