ನವದೆಹಲಿ (ಪಿಟಿಐ): ಆನ್‌ಲೈನ್ ಆಟಗಳನ್ನು ಒದಗಿಸುವ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಕಂಪನಿಯು ಅಂದಾಜು 350 ಜನರನ್ನು ಕೆಲಸದಿಂದ ತೆಗೆದುಹಾಕಿದೆ. ವೆಚ್ಚಗಳನ್ನು ತಗ್ಗಿಸುವ ಉದ್ದೇಶದಿಂದ, ಆನ್‌ಲೈನ್ ಆಟಗಳಿಗೆ ಶೇ 28ರಷ್ಟು ಜಿಎಸ್‌ಟಿ ವಿಧಿಸುವುದರಿಂದ ಉಂಟಾಗುವ ಹೊರೆಯನ್ನು ನಿಭಾಯಿಸಲು ಕಂಪನಿ ಹೀಗೆ ಮಾಡಿದೆ ಎನ್ನಲಾಗಿದೆ.
ಜಿಎಸ್‌ಟಿಗೆ ಸಂಬಂಧಿಸಿದ ಹೊಸ ನಿಯಮಗಳು ತೆರಿಗೆ ಹೊರೆಯನ್ನು ಶೇ 400ರವರೆಗೂ ಹೆಚ್ಚಿಸುತ್ತವೆ. ಉದ್ಯಮವಾಗಿ ಈ ಮಟ್ಟದ ಹೆಚ್ಚಳಕ್ಕೆ ಹೊಂದಿಕೊಳ್ಳಬೇಕು ಎಂದಾದರೆ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಕಂಪನಿಯ ಸಹಸಂಸ್ಥಾಪಕ ಸಾಯಿಶ್ರೀನಿವಾಸ್ ಅವರು ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
‘ಸರ್ವರ್ ಹಾಗೂ ಕಚೇರಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಪರಿಷ್ಕರಿಸುವ ಕೆಲಸ ಆರಂಭಿಸಿದ್ದೇವೆ. ಹೀಗಿದ್ದರೂ, ಕೆಲಸಗಾರರಿಗೆ ಸಂಬಂಧಿಸಿದ ವೆಚ್ಚಗಳನ್ನು ಕಡಿಮೆ ಮಾಡಬೇಕಿದೆ. ನಿಮ್ಮ ಪೈಕಿ ಅಂದಾಜು 350 ಜನರನ್ನು ಬಿಟ್ಟುಕೊಡಬೇಕಿದೆ ಎಂಬುದನ್ನು ವಿಷಾದದಿಂದ ಹೇಳುತ್ತಿದ್ದೇನೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ. ಈ ಕುರಿತು ಕಂಪನಿಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.