ಮಂಗಳೂರು: ‘ಕೇಂದ್ರ ಸರ್ಕಾರದ ವಾಹನ ಇಂಧನ ನೀತಿಯಡಿ ಎಂಆರ್‌ಪಿಎಲ್ 2020 ರ ಫೆಬ್ರುವರಿಯಲ್ಲಿ ಬಿಎಸ್–6 ಇಂಧನ ಉತ್ಪಾದನೆ ಆರಂಭಿಸಲಿದೆ’ ಎಂದು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ವೆಂಕಟೇಶ್ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂಆರ್‌ಪಿಎಲ್ ₹1,810 ಕೋಟಿ ವೆಚ್ಚದಲ್ಲಿ ಬಿಎಸ್–6 ಇಂಧನ ಉತ್ಪಾದನೆ ಯೋಜನೆಯನ್ನು ಆರಂಭಿಸಿದ್ದು, 2020 ರ ಫೆಬ್ರುವರಿಯಲ್ಲಿ ಪೂರ್ಣವಾಗಲಿದೆ. ಬಿಎಸ್–6 ಇಂಧನದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಸಲ್ಫರ್‌ನ ಪ್ರಮಾಣ 50 ಪಿಪಿಎಂನಿಂದ 10 ಪಿಪಿಎಂಗೆ ಇಳಿಕೆ ಆಗಲಿದೆ’ ಎಂದು ತಿಳಿಸಿದರು.
‘2018–19 ರಲ್ಲಿ ಎಂಆರ್‌ಪಿಎಲ್ ಒಟ್ಟು ₹72,283 ಕೋಟಿ ವಹಿವಾಟು ನಡೆಸಿದ್ದು, ತೆರಿಗೆ ನಂತರ ₹332 ಕೋಟಿ ಲಾಭ ಗಳಿಸಿದೆ’ ಎಂದರು.
ಅಮೆರಿಕದಿಂದ ಕಚ್ಚಾತೈಲ:‘10 ಲಕ್ಷ ಬ್ಯಾರೆಲ್ ಅಮೆರಿಕ ಉತ್ಪಾದಿತ ಥಂಡರ್ ಹಾರ್ಸ್ ಕಚ್ಚಾತೈಲವನ್ನು ಎಂಆರ್‌ಪಿಎಲ್ ಖರೀದಿಸಿದೆ’ ಎಂದರು.
‘ಈ ಕಚ್ಚಾತೈಲ ಅಕ್ಟೋಬರ್ ಮೊದಲ ವಾರದಲ್ಲಿ ಮಂಗಳೂರಿಗೆ ತಲುಪಲಿದೆ. ಅಮೆರಿಕದಿಂದ ಕಚ್ಚಾತೈಲ ಆಮದು ಸುಲಭವೂ ಆಗಿದೆ’ ಎಂದು ಹೇಳಿದರು.
ರಿಫೈನರಿ ವಿಭಾಗದ ನಿರ್ದೇಶಕ ಎಂ. ವಿನಯಕುಮಾರ್ ಮಾತನಾಡಿ, ‘ರಾಜಸ್ಥಾನದ ಮಂಗಲಾ ಫೀಲ್ಡ್‌ನ ಕಚ್ಚಾತೈಲವನ್ನು ಪರೀಕ್ಷೆ ಮಾಡಿದ್ದು, ಇದು ಗಡುಸಾಗಿದೆ. ಹೀಗಾಗಿ ಎಂಆರ್‌ಪಿಎಲ್ ಇದನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.