ADVERTISEMENT

ಎಂಎಸ್‌ಎಂಇ ಉದ್ಯಮ ಸಲಹೆ

ಮದನ್ ಪದಕಿ
Published 6 ಆಗಸ್ಟ್ 2020, 21:37 IST
Last Updated 6 ಆಗಸ್ಟ್ 2020, 21:37 IST
 ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ (ಎಂಎಸ್‌ಎಂಇ) ಉದ್ದಿಮೆಗಳು
ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ (ಎಂಎಸ್‌ಎಂಇ) ಉದ್ದಿಮೆಗಳು   
""

ಪ್ರಶ್ನೆ: ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಬಳಸುವ ಯಂತ್ರೋಪಕರಣಗಳ ತಯಾರಿಕಾ ಘಟಕವನ್ನು ನಾನು 2018ರಲ್ಲಿ ಸ್ಥಾಪಿಸಿದ್ದೆನು. ಇದಕ್ಕಾಗಿ ನಾನು ಹೂಡಿದ ಬಂಡವಾಳ ₹ 1.2 ಕೋಟಿ. ನನ್ನ ವಹಿವಾಟು ₹ 5 ಕೋಟಿಗಿಂತಲೂ ಕಡಿಮೆ ಇದೆ. ಸವಕಳಿ ಮೊತ್ತವನ್ನು ಕಳೆದಲ್ಲಿ ಯಂತ್ರೋಪಕರಣ ಮತ್ತು ಕಟ್ಟಡದ ಮೇಲೆ ನಾನು ಹೂಡಿದ ಬಂಡವಾಳದ ಮೌಲ್ಯ ಪ್ರಸ್ತುತ ₹ 1 ಕೋಟಿಗಿಂತಲೂ ಕಡಿಮೆ. ಈಗ ನನ್ನ ವಹಿವಾಟನ್ನು ‘ಸೂಕ್ಷ್ಮ ಉದ್ಯಮ’ ಎಂದು ಪರಿಗಣಿಸಬಹುದೇ?

-ರಾಮಮೂರ್ತಿ, ಯಾದಗಿರಿ

ಉತ್ತರ: ತಯಾರಿಕೆ ಮತ್ತು ಸೇವೆಗಳನ್ನು ಒದಗಿಸುವ ಘಟಕಗಳನ್ನು ಸೂಕ್ಷ್ಮ ಉದ್ಯಮಗಳು ಎಂದು ಪರಿಗಣಿಸಲು ಅವುಗಳ ಬಂಡವಾಳ ಮೊತ್ತವನ್ನು ₹ 1 ಕೋಟಿ ಹಾಗೂ ವಹಿವಾಟಿನ ಮೊತ್ತವನ್ನು ₹ 5 ಕೋಟಿ ಎಂದು ನಿಗದಿಪಡಿಸಲಾಗಿದೆ. 2020ರ ಜೂನ್ 30ರವರೆಗೆ ನೋಂದಣಿ ಮಾಡಲಾಗಿರುವ ಎಲ್ಲ ವ್ಯಾಪಾರ ಸಂಸ್ಥೆಗಳನ್ನು ಈ ಪರಿಷ್ಕರಣೆಯ ಪ್ರಕಾರ ವರ್ಗೀಕರಣ ಮಾಡಲಾಗುವುದು. ಕಟ್ಟಡ ಮತ್ತು ಯಂತ್ರೋಪಕರಣಗಳ ಮೇಲೆ ಹೂಡಿರುವ ಬಂಡವಾಳವನ್ನು ಹಿಂದಿನ ವರ್ಷಗಳಲ್ಲಿ ವರಮಾನ ತೆರಿಗೆ ಅಧಿನಿಯಮ, 1961ರ ಅಡಿಯಲ್ಲಿ ನೀವು ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್‌ಗಳ ಜೊತೆಗೆ ತಾಳೆ ಮಾಡಲಾಗುವುದು. ಈ ಆಧಾರಗಳ ಮೇಲೆ ನಿಮ್ಮ ಘಟಕವನ್ನು ಸೂಕ್ತವಾಗಿ ವರ್ಗೀಕರಿಸಲಾಗುವುದು.

ADVERTISEMENT

ಪ್ರಶ್ನೆ:ಬೇಳೆ ತಯಾರಿಸುವನನ್ನ ಮಿಲ್‌ಗೆ ನಾನು ಬ್ಯಾಕ್‌–ಅಪ್‌ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿದ್ದೇನೆ. ನಾನು ಸೌರಶಕ್ತಿಯ ಬ್ಯಾಕ್–ಅಪ್‌ ಆಯ್ಕೆ ಮಾಡಿಕೊಳ್ಳಬೇಕೇ? ಈ ಉದ್ದೇಶಕ್ಕಾಗಿ ಯಾವುದಾದರೂ ಯೋಜನೆಗಳು ಇವೆಯೇ? ಈ ಬಗ್ಗೆ ನಾನು ಯಾರನ್ನು ಸಂಪರ್ಕಿಸಬೇಕು?

-ಶ್ರೀಹರಿ, ಶಿವಮೊಗ್ಗ

ಉತ್ತರ: ಛಾವಣಿಯ ಮೇಲೆ ಅಳವಡಿಸುವ ಸೌರಶಕ್ತಿ ವ್ಯವಸ್ಥೆ ಉತ್ತಮ ಮಾರ್ಗ. ಇದರಿಂದಾಗಿ ಉದ್ಯಮಗಳು ತಾವೇ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ; ಅಷ್ಟರಮಟ್ಟಿಗೆ ಉದ್ಯಮಗಳು ಸ್ವಾವಲಂಬನೆ ಸಾಧಿಸುತ್ತವೆ. ನಿಮ್ಮ ಕಟ್ಟಡದ ಛಾವಣಿಯ ಮೇಲೆ ಸೌರಶಕ್ತಿಯ ಉಪಕರಣ ಸ್ಥಾಪಿಸಬಹುದಾಗಿದೆ. ಉದ್ಯಮಗಳಿಗೆ ಆನ್ ಗ್ರಿಡ್ ಸೌರಶಕ್ತಿ ವ್ಯವಸ್ಥೆಯನ್ನು ಅಳವಡಿಸುವುದು ಸೂಕ್ತ. ಇದರಿಂದಾಗಿ ವಿದ್ಯುತ್ ಬಿಲ್‌ನ ಮೊತ್ತದಲ್ಲಿ ಭಾರೀ ಉಳಿತಾಯ ಆಗುತ್ತದೆ ಮತ್ತು ನಿಮ್ಮ ಹೂಡಿಕೆಯ ಮೊತ್ತವನ್ನು ಬೇಗನೆ ಹಿಂಪಡೆಯಬಹುದು. ಮೇಲಾಗಿ, ಈ ಸೌರಶಕ್ತಿ ವ್ಯವಸ್ಥೆಯ ನಿರ್ವಹಣಾ ವೆಚ್ಚವೂ ಕಡಿಮೆ. ಕೇಂದ್ರ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನಗಳ ಇಲಾಖೆಯು ಛಾವಣಿ ಮೇಲೆ ಅಳವಡಿಸುವ ಸೌರಶಕ್ತಿ ವ್ಯವಸ್ಥೆಗಳಿಗೆ ಸಬ್ಸಿಡಿ ನೀಡುತ್ತದೆ. ಇವುಗಳ ತಯಾರಕರಿಗೆ ಇದರ ಬಗ್ಗೆ ಮಾಹಿತಿ ಇರುತ್ತದೆ. ಅವರೊಡನೆ ಸಬ್ಸಿಡಿ ಕುರಿತು ಒಮ್ಮೆ ಖಚಿತಪಡಿಸಿಕೊಳ್ಳಿ.

ಪ್ರಶ್ನೆ:ನಾನು ಆಸ್ಪತ್ರೆಗಳಿಗೆ ಕೇಟರಿಂಗ್ ಸೇವೆ ಒದಗಿಸುವ ಉದ್ಯಮ ನಡೆಸುತ್ತಿದ್ದೇನೆ. ನಾವು ಸರಬರಾಜು ಮಾಡುವ ಆಹಾರವು ಪೋಷಕಾಂಶಗಳಿಂದ ಕೂಡಿದ್ದು ರೋಗಿಗಳ ಅವಶ್ಯಕತೆಗೆ ತಕ್ಕಂತೆ ಇರುತ್ತದೆ. ಈ ಸೇವೆಯನ್ನು ಬೇರೆ ಸ್ಥಳಗಳಲ್ಲಿ ಒದಗಿಸಲು ನನಗೆ ಸಮರ್ಥ ತಂಡದ ಅಗತ್ಯವಿದೆ. ಇಂತಹ ತಂಡಗಳನ್ನು ನಾನು ಹೇಗೆ ಸಂಪರ್ಕಿಸಬಹುದು ಮತ್ತು ನಾನು ಈ ಕಾರ್ಯಾಚರಣೆಯನ್ನು ಹೇಗೆ ನಿರ್ವಹಿಸಬಹುದು?

-ಮನೋಹರ್, ಮೈಸೂರು

ಉತ್ತರ: ಆಸ್ಪತ್ರೆಗಳಿಗೆ ಕೇಟರಿಂಗ್ ಸೇವೆ ಒದಗಿಸುವುದು ವಿಪುಲ ವ್ಯಾಪಾರದ ಅವಕಾಶಗಳನ್ನು ನೀಡುತ್ತದೆ. ಮಂಚೂಣಿಯಲ್ಲಿರುವ ಹಲವಾರು ಆಸ್ಪತ್ರೆಗಳು ಈ ಉದ್ದೇಶಕ್ಕಾಗಿ ಟೆಂಡರ್ ಕರೆಯುತ್ತವೆ. ಅಂತಹ ಜಾಹೀರಾತು ಪ್ರಕಟಣೆಗಳನ್ನು ನೀವು ಗಮನಿಸಬೇಕು. ಆಸ್ಪತ್ರೆಗಳನ್ನು ನಿರ್ವಹಣೆ ಮಾಡುವವರೊಂದಿಗೆ ಸಂಪರ್ಕದಲ್ಲಿರಿ. ಪ್ರಾರಂಭದಲ್ಲಿ ಸುತ್ತ-ಮುತ್ತ ಇರುವ ನಗರಗಳಲ್ಲಿ ಸೇವೆ ಪ್ರಾರಂಭಿಸಿರಿ. ಇದರಿಂದ ನಿಮಗೆ ನಿರ್ವಹಣೆ ಮತ್ತು ಆಡಳಿತ ಸುಲಭವಾಗುತ್ತದೆ. ಈ ಉದ್ದೇಶಕ್ಕಾಗಿ ಸುಲಭವಾಗಿ ಎಟುಕುವ ಸಾಫ್ಟ್‌ವೇರ್‌ಗಳಿಗಾಗಿ ಹುಡುಕಾಟ ನಡೆಸಿ. ಈ ರೀತಿಯ ಕಾರ್ಯಾಚರಣೆಯ ಅನುಭವ ಹೊಂದಿರುವ ಮತ್ತು ತಂಡಗಳನ್ನು ನಿರ್ವಹಿಸುವಲ್ಲಿ ನಿಮಗೆ ಸಹಾಯ ಮಾಡಬಹುದಾದ ಪರಿಣತ ವ್ಯಕ್ತಿಯೊಬ್ಬರನ್ನು ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿಕೊಳ್ಳಿರಿ.

ಪ್ರಸ್ತುತ ಸನ್ನಿವೇಶದಲ್ಲಿ ಹೋಟೆಲ್ ಮತ್ತು ರೆಸ್ಟಾರೆಂಟ್‌ಗಳಿಗೆ ವ್ಯಾಪಾರ ಕಡಿಮೆಯಾಗಿದ್ದು, ನೀವು ಜಾಹೀರಾತು ನೀಡಿದಲ್ಲಿ ಸೂಕ್ತ ವ್ಯಕ್ತಿಗಳು ನಿಮಗೆ ದೊರಕುವ ಸಂಭವ ಹೆಚ್ಚು.

***

ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ಉದ್ಭವಿಸಿದ ಸಮಸ್ಯೆಗಳಿಂದಾಗಿ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ (ಎಂಎಸ್‌ಎಂಇ) ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿವೆ. ಗ್ಲೋಬಲ್ ಅಲಯನ್ಸ್ ಫಾರ್ ಮಾಸ್ ಆಂತ್ರಪ್ರ್ಯೂನರ್‌ಷಿಪ್‌ನ (ಗೇಮ್) ಸಹ ಸ್ಥಾಪಕ ಮದನ್ ‍ಪದಕಿ ಅವರು ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳಿಗೆ ಸಮಾಧಾನವನ್ನು ಈ ಅಂಕಣದ ಮೂಲಕ ನೀಡುತ್ತಿದ್ದಾರೆ.

ಪ್ರಶ್ನೆ, ಸಲಹೆಗಳ ವಿಚಾರವಾಗಿ ಸಹಾಯವಾಣಿ (7397779520) ಹಾಗೂ ಇ–ಮೇಲ್‌ ಮೂಲಕ gamesupportnetwork@massentrepreneurship.org ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.