ಬೆಂಗಳೂರು: ಫೋಬ್ಸ್ ನಿಯತಕಾಲಿಕ ಪ್ರಕಟಿಸಿರುವ 2023ರ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರು ಮೊದಲನೇ ಸ್ಥಾನಕ್ಕೆ ಏರಿದ್ದಾರೆ. ಉದ್ಯಮಿ ಗೌತಮ್ ಅದಾನಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಸಂಪತ್ತು ಮೌಲ್ಯವು ₹7.63 ಲಕ್ಷ ಕೋಟಿಗೆ ತಲುಪುವ ಮೂಲಕ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಕಳೆದ ವರ್ಷ 100 ಸಿರಿವಂತರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿಕೆ ಕಂಡಿದ್ದ ಗೌತಮ್ ಅದಾನಿ ಅವರು ಈ ವರ್ಷ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ವರದಿ ಪ್ರಕಟವಾದ ಬಳಿಕ ಅದಾನಿ ಅವರ ಸಂಪತ್ತು ಮೌಲ್ಯವು ₹6.80 ಲಕ್ಷ ಕೋಟಿಯಿಂದ ₹5.64 ಲಕ್ಷ ಕೋಟಿಗೆ ಕುಸಿತ ಕಂಡಿದೆ. ಹೀಗಾಗಿ ಅವರು ಮತ್ತೆ ಎರಡನೇ ಸ್ಥಾನಕ್ಕೆ ಬರುವಂತಾಯಿತು ಎಂದು ಹೇಳಿದೆ.
ದೇಶದ 100 ಸಿರಿವಂತರ ಒಟ್ಟು ಸಂಪತ್ತು ಮೌಲ್ಯವು ಕಳೆದ ವರ್ಷದಷ್ಟೇ ಅಂದರೆ ₹66.31 ಲಕ್ಷ ಕೋಟಿ ಇದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಕಂಡಿದ್ದರಿಂದ ಒಟ್ಟು ಮೌಲ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ತಿಳಿಸಿದೆ.
ಮೂವರು ಹೊಸಬರು: ಈ ವರ್ಷ ಮೂವರು ಹೊಸಬರು ಸಿರಿವಂತರ ಪಟ್ಟಿಗೆ ಸೇರಿದ್ದಾರೆ. ಲ್ಯಾಂಡ್‌ಮಾರ್ಕ್ ಸಮೂಹದ ಅಧ್ಯಕ್ಷೆ ರೇಣುಕಾ ಜೆ. ಅವರ ಸಂಪತ್ತು ಮೌಲ್ಯವು ₹39,840 ಕೋಟಿ ಇದ್ದು 44ನೇ ಸ್ಥಾನ ಪಡೆದುಕೊಂಡಿದ್ದಾರೆ. ಏಷ್ಯನ್ ಪೇಂಟ್ಸ್‌ನ ದನಿ ಕುಟುಂಬವು ₹66,400 ಕೋಟಿ ಸಂಪತ್ತಿನೊಂದಿಗೆ 22ನೇ ಸ್ಥಾನದಲ್ಲಿದೆ. ಕೆ.ಪಿ.ಆರ್. ಮಿಲ್‌ನ ಸ್ಥಾಪಕ ಕೆ.ಪಿ. ರಾಮಸ್ವಾಮಿ ಅವರು ₹19,090 ಕೋಟಿ ಸಂಪತ್ತು ಹೊಂದುವ ಮೂಲಕ 100 ನೇ ಸ್ಥಾನದಲ್ಲಿದ್ದಾರೆ.
ಮುಕೇಶ್ ಅಂಬಾನಿ: ₹7.63
ಗೌತಮ್ ಅದಾನಿ: ₹5.64
ಶಿವ ನಾಡಾರ್: ₹2.43
ಸಾವಿತ್ರಿ ಜಿಂದಾಲ್: ₹1.99
ರಾಧಾಕಿಷನ್ ದಮಾನಿ: ₹1.90
ಸೈರಸ್ ಪೂನಾವಾಲ: ₹1.71
ಹಿಂದುಜಾ ಕುಟುಂಬ: ₹1.66
ದಿಲೀಪ್ ಸಾಂಘ್ವಿ: ₹1.57
ಕುಮಾರ ಬಿರ್ಲಾ: ₹1.45
ಶಾಪೂರ್ ಮಿಸ್ತ್ರಿ ಮತ್ತು ಕುಟುಂಬ: ₹1.40
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.