ADVERTISEMENT

Hurun List: ಮುಂಬೈ ಶತಕೋಟ್ಯಧಿಪತಿಗಳ ರಾಜಧಾನಿ

Hurun Global Rich List 2024

ಪಿಟಿಐ
Published 26 ಮಾರ್ಚ್ 2024, 11:59 IST
Last Updated 26 ಮಾರ್ಚ್ 2024, 11:59 IST
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ    

ಮುಂಬೈ: ಹುರೂನ್ ಜಾಗತಿಕ ಶ್ರೀಮಂತರ ಪಟ್ಟಿ–2024 (Hurun Global Rich List) ಪ್ರಕಟವಾಗಿದ್ದು ವರದಿಯ ಪ್ರಕಾರ ಭಾರತದ ಆರ್ಥಿಕ ರಾಜಧಾನಿ ಎನಿಸಿಕೊಂಡಿರುವ ಮುಂಬೈ ಭಾರತದಲ್ಲಿ ಅತಿಹೆಚ್ಚು ಬಿಲಿಯನೇರ್‌ಗಳನ್ನು (ಶತಕೋಟ್ಯಧಿಪತಿಗಳು) ಹೊಂದಿರುವ ನಗರವಾಗಿ ಹೊರಹೊಮ್ಮಿದೆ.

ಇನ್ನೂ ವಿಶೇಷವೆಂದರೆ ಚೀನಾ ರಾಜಧಾನಿ ಬೀಜಿಂಗ್‌ ಅನ್ನು ಮೀರಿಸಿ ಮುಂಬೈಗೆ ಈ ಮನ್ನಣೆ ಸಿಕ್ಕಿದೆ.

ಬೀಜಿಂಗ್‌ನಲ್ಲಿ ಒಟ್ಟು 91 ಬಿಲಿಯನೇರ್‌ಗಳು ಇದ್ದರೆ, ಮುಂಬೈನಲ್ಲಿ ಒಟ್ಟು 92 ಬಿಲಿಯನೇರ್‌ಗಳು ಇದ್ದಾರೆ ಎಂದು ಹುರೂನ್ ಹೇಳಿದೆ.

ADVERTISEMENT

ನ್ಯೂಯಾರ್ಕ್‌ನಲ್ಲಿ 119 (ಮೊದಲ ಸ್ಥಾನ), ಲಂಡನ್‌ನಲ್ಲಿ 97 ಬಿಲಿಯನೇರ್‌ಗಳು ಇದ್ದಾರೆ. ಈ ಮೂಲಕ ಅತಿಹೆಚ್ಚಿನ ಶ್ರೀಮಂತರನ್ನು ಹೊಂದಿರುವ ಜಾಗತಿಕ ಮೂರನೇ ಅತಿದೊಡ್ಡ ನಗರವಾಗಿ ಮುಂಬೈ ಕಂಡು ಬಂದಿದೆ. ಪಟ್ಟಿಯ ಪ್ರಕಾರ ಸದ್ಯ ಜಗತ್ತಿನಲ್ಲಿ ಒಟ್ಟಾರೆ 3,279 ಬಿಲಿಯನೇರ್‌ಗಳನ್ನು ಗುರುತಿಸಲಾಗಿದೆ.

ಚೀನಾದಲ್ಲಿ ಒಟ್ಟಾರೆ 814 ಬಿಲಿಯನೇರ್‌ಗಳು ಕಂಡು ಬಂದರೆ ಭಾರತದಲ್ಲಿ 271 ಬಿಲಿಯನೇರ್‌ಗಳಿದ್ದಾರೆ ಎಂದು ಹೇಳಿದೆ.

ಈ ಮೂಲಕ ಹುರೂನ್ ಜಗತ್ತಿನ ಅತಿ ಹೆಚ್ಚಿನ ಶ್ರೀಮಂತರು ಯಾರು ಎಂಬುದನ್ನೂ ಬಿಡುಗಡೆ ಮಾಡಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಮೊದಲ ಸ್ಥಾನ ಪಡೆದರೆ, ಅಮೆಜಾನ್‌ನ ಜೆಫ್ ಬೆಜೋಸ್ ಎರಡನೇ ಸ್ಥಾನ ಹಾಗೂ LVMH ಸಿಇಒ, ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಮೂರನೇ ಸ್ಥಾನ ಪಡೆದಿದ್ದಾರೆ.

ಭಾರತದ ಮುಕೇಶ್ ಅಂಬಾನಿ ಅವರು ಈ ಪಟ್ಟಿಯಲ್ಲಿ ಜಗತ್ತಿನ 10 ನೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ. ಗೌತಮ್ ಅದಾನಿ 15ನೇ ಸ್ಥಾನ ಪಡೆದಿದ್ದಾರೆ.

ಭಾರತೀಯ ಬಿಲಿಯನೇರ್‌ಗಳ ಒಟ್ಟು ಸಂಪತ್ತು ಒಂದು ಟ್ರಿಲಿಯನ್ ಯುಎಸ್ ಡಾಲರ್‌ಗೆ ಸಮ ಎಂದು ವರದಿ ಹೇಳಿದೆ. ಚೀನಾದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಬೆಳವಣಿಗೆ ಕುಸಿಯುತ್ತಿರುವುದರಿಂದ ಭಾರತ ಜಗತ್ತಿನಲ್ಲಿ ಅತ್ಯಂತ ತ್ವರಿತವಾಗಿ ಆರ್ಥಿಕವಾಗಿ ಬೆಳೆಯುತ್ತಿರುವ ದೇಶವಾಗಿ ಚೀನಾವನ್ನೂ ಹಿಂದಿಕ್ಕಿದೆ ಎಂದು ಹುರೂನ್ ಹೇಳಿದೆ.

ಭಾರತದ ಶೇ 40 ರಷ್ಟು ಸಂಪತ್ತು ಕೇವಲ ಶೇ 1 ರಷ್ಟು ಶ್ರೀಮಂತರ ಬಳಿ ಇದೆ ಎಂದು ಈ ವರದಿ ಹೇಳಿದೆ.

ಆರ್ಥಿಕ ವಿಶ್ಲೇಷಕ, ಸಂಶೋಧಕ Rupert Hoogewerf ಎನ್ನುವವರು ಅಧ್ಯಕ್ಷರಾಗಿರುವ ಹುರೂನ್ ಸಂಸ್ಥೆ ಪ್ರತಿವರ್ಷ Hurun Global Rich List ಪ್ರಕಟಿಸುತ್ತದೆ. ವೈಯಕ್ತಿಕವಾಗಿ ಕನಿಷ್ಠ ಸಾವಿರ ಕೋಟಿ ರೂಪಾಯಿ ನಿವ್ವಳ ಆಸ್ತಿ ಮೌಲ್ಯ ಹೊಂದಿರುವವರನ್ನು ಪಟ್ಟಿಗೆ ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.