ADVERTISEMENT

ಭಾರತದಲ್ಲಿ ಟೆಸ್ಲಾದಿಂದ ₹25 ಸಾವಿರ ಕೋಟಿ ಹೂಡಿಕೆ?

ರಾಯಿಟರ್ಸ್
Published 17 ಏಪ್ರಿಲ್ 2024, 16:13 IST
Last Updated 17 ಏಪ್ರಿಲ್ 2024, 16:13 IST
ಇಲಾನ್ ಮಸ್ಕ್‌ –ರಾಯಿಟರ್ಸ್‌ ಚಿತ್ರ
ಇಲಾನ್ ಮಸ್ಕ್‌ –ರಾಯಿಟರ್ಸ್‌ ಚಿತ್ರ   

ನವದೆಹಲಿ: ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾ, ಭಾರತದಲ್ಲಿ ₹16,700 ಕೋಟಿಯಿಂದ ₹25 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಟೆಸ್ಲಾ ಕಂಪನಿ ಮುಖ್ಯಸ್ಥ ಇಲಾನ್‌ ಮಸ್ಕ್‌ ಅವರು, ಏಪ್ರಿಲ್‌ 22ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಭಾರತದಲ್ಲಿ ಟೆಸ್ಲಾ ಕಂಪನಿಯ ಘಟಕದ ಸ್ಥಾಪನೆ ಬಗ್ಗೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಿವೆ.

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರುಕಟ್ಟೆ ದೊಡ್ಡಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ. ಆದರೆ, ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟರ್ಸ್‌ ಹಿಡಿತ ಸಾಧಿಸಿದೆ.

ADVERTISEMENT

2023ರಲ್ಲಿ ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರಾಟವು ಶೇ 2ರಷ್ಟಿದೆ. 2030ರ ವೇಳೆಗೆ ಇವುಗಳ ಮಾರಾಟದ ಪ್ರಮಾಣವನ್ನು ಶೇ 30ರಷ್ಟಕ್ಕೆ ಹೆಚ್ಚಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. 

ಈ ನಡುವೆಯೇ ಅಮೆರಿಕ ಮತ್ತು ಚೀನಾ ಮಾರುಕಟ್ಟೆಯಲ್ಲಿ ಟೆಸ್ಲಾ ಕಂಪನಿಯ ಕಾರುಗಳ ಮಾರಾಟವು ಕುಸಿದಿದೆ. ಹಾಗಾಗಿಯೇ, ಬಂಡವಾಳ ವೆಚ್ಚಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಕಂಪನಿಯಲ್ಲಿನ ಶೇ 10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮಸ್ಕ್‌ ನಿರ್ಧರಿಸಿದ್ದಾರೆ.

ಕೇಂದ್ರವು ಎಲೆಕ್ಟ್ರಿಕ್‌ ಕಾರುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿದ್ದ ಬಗ್ಗೆ ಮಸ್ಕ್‌ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸುಂಕವನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸಿದ್ದರು.

ಇತ್ತೀಚೆಗೆ ಕೇಂದ್ರ ಸರ್ಕಾರವು ಹೊಸ ಎಲೆಕ್ಟ್ರಿಕ್‌ ವಾಹನ ನೀತಿಯನ್ನು ಘೋಷಿಸಿದೆ. ಇದರಡಿ ಕನಿಷ್ಠ ₹4,169 ಕೋಟಿ ಹೂಡಿಕೆಯೊಂದಿಗೆ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದಲ್ಲಿ ರಿಯಾಯಿತಿ ಪ್ರಕಟಿಸಲಾಗಿದೆ. ಇದು ಟೆಸ್ಲಾಗೆ ವರದಾನವಾಗಲಿದೆ ಎಂದು ಹೇಳಲಾಗಿದೆ. 

ಈಗಾಗಲೇ ಟೆಸ್ಲಾ ಕಂಪನಿಯು ನವದೆಹಲಿ ಮತ್ತು ಮುಂಬೈನಲ್ಲಿ ಷೋ ರೂಂಗೆ ಸ್ಥಳದ ಹುಡುಕಾಟ ನಡೆಸಿದೆ. ಬರ್ಲಿನ್‌ನಲ್ಲಿರುವ ತನ್ನ ಘಟಕದಿಂದ ಭಾರತಕ್ಕೆ ಎಲೆಕ್ಟ್ರಿಕ್‌ ಕಾರುಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರವು ನವದೆಹಲಿಯಲ್ಲಿ ಸ್ಪೇಸ್‌ ನವೋದ್ಯಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಮಸ್ಕ್‌ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಮಸ್ಕ್‌ ಅವರು ಅಮೆರಿಕದಲ್ಲಿ ‘ಸ್ಪೇಸ್‌ಎಕ್ಸ್‌’ ಹೆಸರಿನ ಖಾಸಗಿ ರಾಕೆಟ್‌ ಕಂಪನಿಯ ಒಡೆತನ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.