ನವದೆಹಲಿ: ಮ್ಯೂಚುವಲ್ ಫಂಡ್‌ಗಳ ಬಗ್ಗೆ ಅರಿವು ಹೆಚ್ಚಾಗುತ್ತಿರುವುದು, ವಹಿವಾಟು ನಡೆಸುವುದು ಸುಲಭಗೊಂಡಿರುವುದು ಹಾಗೂ ಷೇರುಪೇಟೆಯ ಏರಿಕೆಯ ಕಾರಣಗಳಿಂದಾಗಿ 2021–22ರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ಸಂಬಂಧಿಸಿದಂತೆ ಹೊಸದಾಗಿ 3.17 ಕೋಟಿ ಖಾತೆಗಳು ಸೇರ್ಪಡೆ ಆಗಿವೆ.
ಉದ್ಯಮದಲ್ಲಿನ ಒಟ್ಟು ಖಾತೆಗಳ ಸಂಖ್ಯೆಯು 2021ರ ಮಾರ್ಚ್‌ನಲ್ಲಿ 9.78 ಕೋಟಿ ಇತ್ತು. 2022ರ ಮಾರ್ಚ್ ಅಂತ್ಯದ ವೇಳೆಗೆ 12.95 ಕೋಟಿಗೆ ಏರಿಕೆ ಆಗಿದೆ. 2020–21ನೇ ಹಣಕಾಸು ವರ್ಷದಲ್ಲಿ ಹೊಸದಾಗಿ 81 ಲಕ್ಷ ಖಾತೆಗಳು ಸೇರ್ಪಡೆ ಆಗಿದ್ದವು ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.
ಪ್ರಸಕ್ತ ಹಣಕಾಸು ವರ್ಷವೂ ಭರವಸೆದಾಯಕ ಆಗಿರುವಂತೆ ಕಾಣುತ್ತಿದೆ. ಜನರು ನಿಶ್ಚಿತ ಠೇವಣಿಗಳು ಮತ್ತು ಉಳಿತಾಯ ಖಾತೆಗಳಿಂದಾಚೆಗೆ ಗಮನ ಹರಿಸುವಂತೆ ಆಗಲಿದೆ ಎಂದು ಎಲ್‌ಎಕ್ಸ್‌ಎಂಇ ಸ್ಥಾಪಕಿ ಪ್ರೀತಿ ರಾಠಿ ಗುಪ್ತಾ ಹೇಳಿದ್ದಾರೆ.
ಮಾರುಕಟ್ಟೆ ಪರಿಸ್ಥಿತಿ, ಜಾಗತಿಕ ಬಿಕ್ಕಟ್ಟು, ಹಣದುಬ್ಬರ ದರ, ಹೂಡಿಕೆ ಮತ್ತು ಜನರಿಗೆ ತಿಳವಳಿಕೆ ಹೆಚ್ಚಾಗುತ್ತಿರುವುದು ಉದ್ಯಮದ ಮೇಲೆ ಪ್ರಭಾವ ಬೀರಿದೆ ಎಂದೂ ಅವರು ತಿಳಿಸಿದ್ದಾರೆ.
ಬದಲಾಗುತ್ತಿರುವ ಬಡ್ಡಿದರಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಏರಿಳಿತ ಕಂಡುಬಂದರೆ ಅದರಿಂದ ಸಣ್ಣ ಹೂಡಿಕೆದಾರರು ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಖಾತೆಗಳ ಸಂಖ್ಯೆ ಕಡಿಮೆ ಆಗುವ ಸಂಭವ ಇದೆ ಎಂದು ನಿಯೋ ಕಂಪನಿಯ ಯೋಜನಾ ಮುಖ್ಯಸ್ಥ ಸ್ವಪ್ನಿಲ್ ಭಾಸ್ಕರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.