ADVERTISEMENT

ಮ್ಯೂಚುವಲ್‌ ಫಂಡ್‌‌: 81 ಲಕ್ಷ ಹೊಸ ಖಾತೆ

ಏಪ್ರಿಲ್‌–ಮೇ ಅವಧಿಯಲ್ಲಿ ಶೇ 4.5ರಷ್ಟು ಏರಿಕೆ

ಪಿಟಿಐ
Published 16 ಜೂನ್ 2024, 15:13 IST
Last Updated 16 ಜೂನ್ 2024, 15:13 IST
......
......   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ ಮತ್ತು ಮೇ ತಿಂಗಳ ಅವಧಿಯಲ್ಲಿ ಮ್ಯೂಚುವಲ್‌ ಫಂಡ್‌‌ ಉದ್ಯಮಕ್ಕೆ ಹೊಸದಾಗಿ 81 ಲಕ್ಷ ಹೂಡಿಕೆದಾರರ ಖಾತೆಗಳು ಸೇರ್ಪಡೆಯಾಗಿವೆ. ‌‌

ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟದ (ಎಎಂಎಫ್‌ಐ) ಮಾಹಿತಿ ಪ್ರಕಾರ, ಮಾರ್ಚ್‌ ಅಂತ್ಯಕ್ಕೆ ಒಟ್ಟು ಖಾತೆಗಳ ಸಂಖ್ಯೆ 17.78 ಕೋಟಿ ಇತ್ತು. ಮೇ ಅಂತ್ಯಕ್ಕೆ 18.6 ಕೋಟಿಗೆ ಮುಟ್ಟಿದೆ. ಈ ಎರಡು ತಿಂಗಳ ಅವಧಿಯಲ್ಲಿ ಒಟ್ಟಾರೆ ಶೇ 4.6ರಷ್ಟು ಏರಿಕೆಯಾಗಿದೆ.

ಮ್ಯೂಚುವಲ್‌ ಫಂಡ್‌ ಮಾರುಕಟ್ಟೆಯಲ್ಲಿನ ಸ್ಥಿರತೆ, ಕಂಪನಿಯ ಬ್ರ್ಯಾಂಡ್‌ಗಳಿಗೆ ಉತ್ತೇಜನ ಹಾಗೂ ಫಂಡ್‌ಗಳ ವಿತರಣೆಯ ಜಾಲದ ಸಕ್ರಿಯ ಕಾರ್ಯಾಚರಣೆಯಿಂದಾಗಿ ಖಾತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

‘ಮ್ಯೂಚುವಲ್‌ ಫಂಡ್‌ಗಳು ಹೂಡಿಕೆದಾರರಿಗೆ ಹೆಚ್ಚು ಗಳಿಕೆ ನೀಡುತ್ತಿದ್ದು, ಅವರ ಆದಾಯದ ಮಟ್ಟ ಹೆಚ್ಚಳಕ್ಕೆ ನೆರವಾಗುತ್ತಿವೆ. ಬ್ಯಾಂಕ್‌ನ ನಿಶ್ಚಿತ ಅವಧಿ ಠೇವಣಿಗಳಲ್ಲಿ ಹೂಡಿಕೆಯಿಂದ ಇಷ್ಟು ಲಾಭ ಗಳಿಕೆ ಸಾಧ್ಯವಿಲ್ಲ. ಈ ಬಗ್ಗೆ ಜನರಲ್ಲಿದ್ದ ಗ್ರಹಿಕೆಯೂ ಬದಲಾಗಿದೆ. ಹಾಗಾಗಿ, ಮ್ಯೂಚುವಲ್‌ ಫಂಡ್‌ಗಳತ್ತ ಮುಖ ಮಾಡಿದ್ದಾರೆ’ ಎಂದು ಷೇರು ಮಾರಾಟ ವೇದಿಕೆಯಾದ ಟ್ರೇಡೆಜಿನಿ ಸಿಒಒ ತ್ರಿವೇಶ್‌ ಡಿ. ತಿಳಿಸಿದ್ದಾರೆ.

‘ಷೇರುಪೇಟೆಯಲ್ಲಿ ಗೂಳಿಯ ಓಟ ಮುಂದುವರಿದಿದ್ದು, ಮಾರುಕಟ್ಟೆಯ ಪರಿಸ್ಥಿತಿ ಸುಧಾರಿಸಿದೆ. ಜನರಿಗೆ ತಿಳಿವಳಿಕೆ ಹೆಚ್ಚಾಗುತ್ತಿರುವುದು ಕೂಡ ಮ್ಯೂಚುವಲ್‌ ಫಂಡ್‌ ಉದ್ಯಮದ ಮೇಲೆ ‍ಪ್ರಭಾವ ಬೀರಿದೆ’ ಎಂದು ಹೇಳಿದ್ದಾರೆ.

‘ದೇಶದ ತಲಾ ಆದಾಯ ಹೆಚ್ಚಾದಂತೆ ಹೂಡಿಕೆದಾರರ ಚಿತ್ತವು ಸಂಪತ್ತು ವೃದ್ಧಿಸುವ ಮಾರ್ಗಗಳತ್ತ ಹರಿಯುವುದು ಸಹಜ. ಹಣದುಬ್ಬರವನ್ನು ಮೀರಿ ಆದಾಯ ತಂದುಕೊಡುವಂತಹ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಹಾಗಾಗಿ, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯು ಏರುಗತಿಯಲ್ಲಿದೆ’ ಎಂದು ಪಿಜಿಐಎಂ ಇಂಡಿಯಾ ಮ್ಯೂಚುವಲ್‌ ಫಂಡ್‌ನ ಸಿಬಿಒ ಅಭಿಷೇಕ್‌ ತಿವಾರಿ ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ಈ ಉದ್ಯಮಕ್ಕೆ 36.11 ಲಕ್ಷ ಹೊಸದಾಗಿ ಸೇರ್ಪಡೆಯಾಗಿದ್ದರೆ, ಮೇ ತಿಂಗಳಿನಲ್ಲಿ 45 ಲಕ್ಷ ಹೂಡಿಕೆದಾರರು ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷದಲ್ಲಿ ಮಾಸಿಕವಾರು ಹೊಸದಾಗಿ ಹೂಡಿಕೆದಾರರ ಸೇರ್ಪಡೆಯ ಸ‌ರಾಸರಿ ಸಂಖ್ಯೆ 22.3 ಲಕ್ಷ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.