ತಿಪಟೂರು (ತುಮಕೂರು): ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ರಾಜ್ಯ ಸರ್ಕಾರ ಶೀಘ್ರ ‘ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ’ (ಎನ್‌ಎಎಫ್‌ಇಡಿ–ನಾಫೆಡ್) ಕೇಂದ್ರ ಆರಂಭಿಸಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಯೋಜನೆ ಅಡಿ ನಾಫೆಡ್, ಬೆಳೆಗಾರರಿಂದ ಕೊಬ್ಬರಿ ಖರೀದಿಸಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕೆಲವು ವರ್ಷಗಳಿಂದ ಕ್ವಿಂಟಲ್‌ಗೆ ₹ 15 ಸಾವಿರ ಅಸುಪಾಸಿನಲ್ಲಿದ್ದ ಕೊಬ್ಬರಿ ದರ ಮೂರು ತಿಂಗಳಿನಿಂದ ಕುಸಿದಿದೆ. ಇದರಿಂದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡು ವರ್ಷದಿಂದ ಕೊಬ್ಬರಿ ಸರಿಯಾದ ಸಮಯಕ್ಕೆ ಬಾರದೇ ಹಸಿ ಅಂಶ ಉಳಿದುಕೊಂಡು ಬೆಳೆಗಾರರಿಗೆ ನಷ್ಟವಾಗುತ್ತಿದೆ’ ಎಂದರು.
ಆರ್ಥಿಕ ತಜ್ಞರೊಂದಿಗೆ ಅಧಿಕಾರಿಗಳು ಸಮಾಲೋಚನೆ ನಡೆಸಿದ ನಂತರ ಉಂಡೆ ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹ 11,750ಕ್ಕೆ ನಿಗದಿಪಡಿಸಿದ್ದಾರೆ. ಇದರ ಜೊತೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ನೀಡಲಾಗುವುದು ಎಂದು ಸಚಿವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.