ಬೆಂಗಳೂರು: ‘ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ನ್ಯಾನೊ ಸೈನ್ಸ್ ಕೌಶಲ ಕೇಂದ್ರ ಸ್ಥಾಪನೆಗೆ ಬೆಂಬಲ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
2018ರ ಬೆಂಗಳೂರು ಇಂಡಿಯಾ ನ್ಯಾನೊದ10ನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ನ್ಯಾನೋಸೈನ್ಸ್‌ಗೆ ಉತ್ತೇಜನ ನೀಡಲು ಎಲ್ಲಾ ರೀತಿಯ ಬೆಂಬಲವನ್ನೂ ನೀಡುವುದಾಗಿ ಹೇಳಿದರು.
‘ಈ ಕಾರ್ಯಕ್ರಮವು ಮುಂದಿನ ಪೀಳಿಗೆಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧಕರಿಗೆ ಪ್ರೋತ್ಸಾಹದ ಚಿಲುಮೆಯಾಗಿದೆ’ ಎಂದರು.
ಶುಕ್ರವಾರದವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ‘ಉತ್ತಮ ಜಗತ್ತಿಗಾಗಿ ನ್ಯಾನೊ’ ವಿಷಯದ ಕುರಿತು ತಜ್ಞರು ತಮ್ಮ ವಿಚಾರ ಮಂಡಿಸಲಿದ್ದಾರೆ.
‘ಈ ವಿನೂತನ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ವಿಶ್ವದ ಸಾಧಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಿರುವುದು ಶ್ಲಾಘನೀಯ. ಸಂಶೋಧನೆ, ತಂತ್ರಜ್ಞಾನ ಹಾಗೂ ಕೈಗಾರಿಕೆಗಳ ನಡುವೆ ಸಂಪರ್ಕ ಬೆಳೆಸಲು ಈ ಕಾರ್ಯಕ್ರಮ ಸಹಕಾರಿಯಾಗಲಿ’ ಎಂದು ಪ್ರೊ.ಸಿ.ಎನ್.ಆರ್. ರಾವ್ ಆಶಿಸಿದರು.
‘ತುಮಕೂರು ರಸ್ತೆಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾನೊ ಟೆಕ್ನಾಲಜಿ ಕ್ಯಾಂಪಸ್ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಇದರಿಂದ ರಾಜ್ಯದಲ್ಲಿ ನ್ಯಾನೊಸೈನ್ಸ್ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ’ ಎಂದರು.
‘ನ್ಯಾನೊ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯ ಕೂಡ ನಮ್ಮ ರಾಜ್ಯದಲ್ಲಿ ಸಿಗಲಿದೆ’ ಎಂದುಐಟಿ, ಬಿಟಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ವಿವಿಧ ದೇಶಗಳ ಗಣ್ಯರು, 124ಕ್ಕೂ ಅಧಿಕ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.