ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ರಿವರ್ಸ್ ಚಾರ್ಜ್ ಕಾರ್ಯ ವಿಧಾನದಿಂದಾಗಿ (ಆರ್‌ಸಿಎಂ) ಹಲವು ಕಂಪನಿಗಳು ಸಮಸ್ಯೆಗೆ ಸಿಲುಕಿವೆ. ಇದರಿಂದ ಹೂಡಿಕೆದಾರರು ಮತ್ತು ಗ್ರಾಹಕರು ಆತಂಕ ಎದುರಿಸುವಂತಾಗಿದೆ ಎಂದು ಐ.ಟಿ ಉದ್ಯಮ ಸಂಘಟನೆ ನಾಸ್ಕಾಂ ಹೇಳಿದೆ.
₹32,403 ಕೋಟಿ ಸಮಗ್ರ ಜಿಎಸ್‌ಟಿ ವಂಚನೆಗೆ ಸಂಬಂಧಿಸಿದಂತೆ ಇನ್ಫೊಸಿಸ್ ಕಂಪನಿಗೆ, ಬೆಂಗಳೂರಿನ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯವು (ಡಿಜಿಜಿಐ) ನೋಟಿಸ್ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಸ್ಕಾಂ, ‘ಕೈಗಾರಿಕಾ ಕಾರ್ಯಾಚರಣೆಯ ಮಾದರಿ ಅರ್ಥೈಸಿಕೊಳ್ಳದೆ ಜಿಎಸ್‌ಟಿ ಇಲಾಖೆಯು ನೋಟಿಸ್ ನೀಡಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಎಲ್ಲಿಯೂ ಇನ್ಫೊಸಿಸ್ ಹೆಸರನ್ನು ಪ್ರಸ್ತಾಪಿಸಿಲ್ಲ.
ಯಾವುದೇ, ಕಂಪನಿಯು ಸಾಗರೋತ್ತರ ಶಾಖೆಗಳಿಂದ ಸ್ವೀಕರಿಸಿದ ಸರಬರಾಜಿಗೆ ಸಂಬಂಧಿಸಿದಂತೆ ಅನುಸರಿಸುತ್ತಿರುವ ರಿವರ್ಸ್ ಚಾರ್ಜ್ ಕಾರ್ಯ ವಿಧಾನವು ಸಮರ್ಪಕವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
‘ವಿಕಸಿತ ಭಾರತ’ದ ಗುರಿ ಸಾಧನೆಯ ವೇಗ ಹೆಚ್ಚಳಕ್ಕೆ ಸೇವಾ ರಫ್ತು ಸಹಕಾರಿಯಾಗಿದೆ. ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನಕ್ಕೂ ನೆರವಾಗಲಿದೆ ಎಂದು ಹೇಳಿದೆ.
ಹಾಗಾಗಿ, ಸುಗಮವಾಗಿ ವ್ಯಾಪಾರ ವಹಿವಾಟು ನಡೆಯಲು ಪೂರಕವಾದ ನೀತಿಗಳ ಅಗತ್ಯವಿದೆ. ಭಾರತದಲ್ಲಿ ಇರುವ ಯಾವುದೇ ಕಂಪನಿಗೆ ಸಾಗರೋತ್ತರ ಶಾಖೆಗಳಿಂದ ಒದಗಿಸುವ ಸೇವೆಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ಜಿಎಸ್‌ಟಿ ಮಂಡಳಿಯು ಶಿಫಾರಸು ಮಾಡಿದೆ. ಜಿಎಸ್‌ಟಿ ಮಹಾನಿರ್ದೇಶನಾಲಯವು ಇದನ್ನು ಪರಿಗಣಿಸಬೇಕಿದೆ. ನೋಟಿಸ್‌ಗಳು ದೇಶದ ವ್ಯಾಪಾರ ವಹಿವಾಟಿನ ಮೇಲೆ ಅನಿಶ್ಚಿತತೆ ಹಾಗೂ ನಕಾರಾತ್ಮಕ ಪರಿಣಾಮ ಬೀರುವಂತಿರಬಾರದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.