ADVERTISEMENT

ನೈಸರ್ಗಿಕ ಅನಿಲ, ವಿಮಾನ ಇಂಧನಕ್ಕೆ ಜಿಎಸ್‌ಟಿ?

21 ರಂದು ನಡೆಯಲಿರುವ ಮಂಡಳಿ ಸಭೆಯಲ್ಲಿ ಪರಿಶೀಲನೆ

ಪಿಟಿಐ
Published 15 ಜುಲೈ 2018, 19:30 IST
Last Updated 15 ಜುಲೈ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನೈಸರ್ಗಿಕ ಅನಿಲ ಮತ್ತು ವಿಮಾನ ಇಂಧನವನ್ನು (ಎಟಿಎಫ್‌) ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರುವ ಬಗ್ಗೆ ಜಿಎಸ್‌ಟಿ ಮಂಡಳಿಯು ಇದೇ 21ರಂದು ನಡೆಯಲಿರುವ ಸಭೆಯಲ್ಲಿ ಪರಿಶೀಲಿಸಲಿದೆ.

ಹಿಂದಿನ ವರ್ಷದ ಜುಲೈನಲ್ಲಿ ಜಿಎಸ್‌ಟಿ ಜಾರಿಗೆ ತಂದಾಗ, ಕಚ್ಚಾ ತೈಲ, ಪೆಟ್ರೋಲ್‌, ಡೀಸೆಲ್‌, ನೈಸರ್ಗಿಕ ಅನಿಲ ಮತ್ತು ವಿಮಾನ ಇಂಧನವನ್ನು (ಎಟಿಎಫ್‌) ಹೊಸ ತೆರಿಗೆ ವ್ಯವಸ್ಥೆಯಿಂದ ಕೈಬಿಡಲಾಗಿತ್ತು. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವರಮಾನ ನಷ್ಟ ಆಗುತ್ತಿರುವುದರಿಂದ ಈ ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಚಿಂತನೆಗೆ ಈಗ ಚಾಲನೆ ದೊರೆತಿದೆ.

ನೈಸರ್ಗಿಕ ಅನಿಲ ಮತ್ತು ವಿಮಾನ ಇಂಧನವನ್ನು, ಸದ್ಯಕ್ಕೆ ಜಾರಿಯಲ್ಲಿ ಇರುವ ಐದು ಹಂತದ ತೆರಿಗೆ ದರಗಳ ವ್ಯಾಪ್ತಿಗೆ ತರುವುದು ಸುಲಭದ ಕೆಲಸವಾಗಿಲ್ಲ.

ADVERTISEMENT

ಸದ್ಯಕ್ಕೆ ಕೇಂದ್ರ ಸರ್ಕಾರವು ‘ಎಟಿಎಫ್‌’ ಮೇಲೆ ಶೇ 14ರಷ್ಟು ಎಕ್ಸೈಸ್‌ ಡ್ಯೂಟಿ ವಿಧಿಸುತ್ತಿದೆ. ಇದರ ಮೇಲೆ ರಾಜ್ಯ ಸರ್ಕಾರಗಳು ಹೆಚ್ಚುವರಿಯಾಗಿ ಶೇ 30ರವರೆಗೆ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ವಿಧಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಪರಿಗಣಿಸಿದರೆ ‘ಎಟಿಎಫ್‌’ ಮೇಲಿನ ಒಟ್ಟಾರೆ ಹೊರೆ ಶೇ 39 ರಿಂದ ಶೇ 44ರಷ್ಟಾಗುತ್ತದೆ.

ಪರಿಣಾಮಗಳು: ಸದ್ಯಕ್ಕೆ ಗರಿಷ್ಠ ಪ್ರಮಾಣದ ಜಿಎಸ್‌ಟಿ ದರವಾದ ಶೇ 28ರ ವ್ಯಾಪ್ತಿಗೆ ‘ಎಟಿಎಫ್‌’ ತಂದರೆ ಅದರಿಂದ ದೊಡ್ಡ ಪ್ರಮಾಣದ ವರಮಾನ ನಷ್ಟ ಉಂಟಾಗುತ್ತದೆ. ಇದನ್ನು ಭರ್ತಿ ಮಾಡಿಕೊಳ್ಳಲು ಗರಿಷ್ಠ ಮಟ್ಟದ ಜಿಎಸ್‌ಟಿ ಮೇಲೆ ರಾಜ್ಯ ಸರ್ಕಾರಗಳು ‘ವ್ಯಾಟ್‌’ ವಿಧಿಸಲು ಅವಕಾಶ ಮಾಡಿಕೊಡಬೇಕಾಗುತ್ತದೆ.

ಆದರೆ, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಬೇಕಾಗುತ್ತದೆ. ಶೇ 28ರ ಜಿಎಸ್‌ಟಿ ಅನ್ವಯಿಸಿದರೆ, ‘ವ್ಯಾಟ್‌’ ದರ ಕಡಿಮೆ ಇರುವ ರಾಜ್ಯಗಳಲ್ಲಿ ‘ಎಟಿಎಫ್‌’ ದರ ದುಬಾರಿಯಾಗಲಿದೆ.

ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಹಲವಾರು ಉತ್ಪನ್ನಗಳ ಬೆಲೆ ಏರಿಕೆಯು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ. ಕೇಂದ್ರ ಸರ್ಕಾರವು ಕೈಗಾರಿಕೆಗಳಿಗೆ ಮಾರಾಟ ಮಾಡುವ ನೈಸರ್ಗಿಕ ಅನಿಲಕ್ಕೆ ಎಕ್ಸೈಸ್‌ ಡ್ಯೂಟಿಯಿಂದ ವಿನಾಯ್ತಿ ನೀಡಿದೆ. ಆದರೆ, ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ಮೇಲೆ ಶೇ 14ರಷ್ಟು ಎಕ್ಸೈಸ್‌ ಡ್ಯೂಟಿ ವಿಧಿಸುತ್ತಿದೆ.

ನೈಸರ್ಗಿಕ ಅನಿಲದ ಮೇಲೆ ಶೇ 12ರಷ್ಟು ಜಿಎಸ್‌ಟಿ ವಿಧಿಸಿದರೆ ಅದರಿಂದ ರಾಜ್ಯಗಳಿಗೆ ವರಮಾನ ನಷ್ಟ ಆಗಲಿದೆ. ಶೇ 18ರ ತೆರಿಗೆ ವ್ಯಾಪ್ತಿಗೆ ತಂದರೆ, ಅದರಿಂದ ವಿದ್ಯುತ್‌ ಮತ್ತು ರಸಗೊಬ್ಬರಗಳ ತಯಾರಿಕಾ ವೆಚ್ಚವೂ ಹೆಚ್ಚಲಿದೆ.

ಎಟಿಎಫ್‌ ಮೇಲಿನ ಸದ್ಯದ ತೆರಿಗೆ ಹೊರೆ

ಕೇಂದ್ರ ಸರ್ಕಾರದ ಎಕ್ಸೈಜ್‌ ಡ್ಯೂಟಿ;14%
ರಾಜ್ಯಗಳ ಮಾರಾಟ ತೆರಿಗೆ ಅಥವಾ ‘ವ್ಯಾಟ್‌’ (%)

ತಮಿಳುನಾಡು;29

ಕರ್ನಾಟಕ;28

ಮಹಾರಾಷ್ಟ್ರ;25

ದೆಹಲಿ;25

ಛತ್ತೀಸಗಡ;5

ಒಡಿಶಾ;5

***

ನೈಸರ್ಗಿಕ ಅನಿಲದ ಮೇಲಿನ ತೆರಿಗೆ

ಕೇಂದ್ರ ಸರ್ಕಾರದ ಎಕ್ಸೈಸ್‌ ಡ್ಯೂಟಿ;14 %

ರಾಜ್ಯಗಳ ತೆರಿಗೆ ಪ್ರಮಾಣ (%)

ಬಿಹಾರ;20

ಕರ್ನಾಟಕ;14.5

ಮಹಾರಾಷ್ಟ್ರ;13.5

ಗುಜರಾತ್‌;12.8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.