ADVERTISEMENT

ವೈಯಕ್ತಿಕ ಸಾಲ ನೀಡಿಕೆಗೆ ಬಿಗಿ ನಿಯಮ | ತಗ್ಗಲಿದೆ NBFC ಬೆಳವಣಿಗೆ: ಕ್ರಿಸಿಲ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 15:34 IST
Last Updated 22 ನವೆಂಬರ್ 2023, 15:34 IST

ನವದೆಹಲಿ: ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಬೆಳವಣಿಗೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 16–18ರ ಮಟ್ಟಕ್ಕಿಂತಲೂ ಕಡಿಮೆ ಆಗುವ ಅಂದಾಜು ಮಾಡಲಾಗಿದೆ ಎಂದು ಕ್ರಿಸಿಲ್ ರೇಟಿಂಗ್ಸ್‌ ಸಂಸ್ಥೆಯು ಬುಧವಾರ ಹೇಳಿದೆ.

ಅಡಮಾನರಹಿತ ವೈಯಕ್ತಿಕ ಸಾಲ ನೀಡಿಕೆಯ ನಿಯಮಗಳನ್ನು ಆರ್‌ಬಿಐ ಬಿಗಿಗೊಳಿಸಿದೆ. ಇದರಿಂದಾಗಿ ಎನ್‌ಬಿಎಫ್‌ಸಿಗಳು ಅಡಮಾನರಹಿತ ಸಾಲ ನೀಡುವ ಪ್ರಮಾಣ ಕಡಿಮೆ ಆಗಲಿದ್ದು, ಒಟ್ಟಾರೆ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅದು ತಿಳಿಸಿದೆ.

ಎನ್‌ಬಿಎಫ್‌ಸಿಗಳ ಒಟ್ಟು ನಿರ್ವಹಣಾ ಸಂಪತ್ತು ಮೌಲ್ಯದಲ್ಲಿ ಅಡಮಾನರಹಿತ ಸಾಲಗಳ ವಿಭಾಗವು ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಆರ್‌ಬಿಐ ನಿರ್ಧಾರದಿಂದ ಈ ವಿಭಾಗದ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗರುಪ್ರೀತ್‌ ಛಟ್ವಾಲ್‌ ಹೇಳಿದ್ದಾರೆ.

ADVERTISEMENT

ಅಡಮಾನ ಸಹಿತ ಸಾಲ ವಿಭಾಗದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಈ ವಿಭಾಗದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ. ಎನ್‌ಬಿಎಫ್‌ಸಿಗಳ ಒಟ್ಟು ನಿರ್ವಹಣಾ ಸಂಪತ್ತಿನಲ್ಲಿ ಗೃಹ ಸಾಲ ಮತ್ತು ವಾಹನ ಸಾಲ ವಿಭಾಗದ ಪಾಲು ತಲಾ ಶೇ 25 ರಿಂದ ಶೇ 27ರವರೆಗೆ ಇದೆ ಎಂದು ಕ್ರಿಸಿಸ್‌ ಹೇಳಿದೆ.

ಜನರ ಖರೀದಿ ಸಾಮರ್ಥ್ಯವು ಉತ್ತಮವಾಗಿದೆ. ಮನೆ, ವಾಹನ ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿ ಮೇಲೆ ಹೆಚ್ಚು ಹಣ ತೊಡಗಿಸುತ್ತಿದ್ದಾರೆ. ಇದು ಎನ್‌ಬಿಎಫ್‌ಸಿಗಳ ರಿಟೇಲ್ ಸಾಲ ನೀಡಿಕೆಗೆ ವೇಗ ನೀಡಲಿದೆ. ಇದರಿಂದಾಗಿ ಮುಂದಿನ ಹಣಕಾಸು ವರ್ಷದಲ್ಲಿ ಕಂಪನಿಗಳ ನಿರ್ವಹಣಾ ಸಂಪತ್ತು ಮೌಲ್ಯವು ಶೇ 14–17ರವರೆಗೆ ಆರೋಗ್ಯಕರ ಬೆಳವಣಿಗೆ ಕಾಣುವ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದೆ.

‘ಎಸ್‌ಬಿಐನ ಅಡಮಾನರಹಿತ ಸಾಲ ನೀಡಿಕೆ ತಗ್ಗಲಿದೆ’

ಮುಂಬೈ: ಆರ್‌ಬಿಐನ ನಿಯಮದಿಂದಾಗಿ ಎಸ್‌ಬಿಐನ ಅಡಮಾನರಹಿತ ಸಾಲ ನೀಡಿಕೆಯ ಪ್ರಮಾಣವು ಕಡಿಮೆ ಆಗಲಿದೆ ಎಂದು ಅಧ್ಯಕ್ಷ ದಿನೇಶ್ ಕುಮಾರ್ ಖರಾ ಹೇಳಿದ್ದಾರೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಬಡ್ಡಿ ಗಳಿಕೆಯು ಶೇ 0.02 ರಿಂದ ಶೇ 0.03ರವರೆಗೆ ಕಡಿಮೆ ಆಗುವ ಅಂದಾಜು ಮಾಡಲಾಗಿದೆ ಎಂದಿದ್ದಾರೆ. ಬ್ಯಾಂಕ್‌ನ ಅಡಮಾನರಹಿತ ಸಾಲಗಳ ಎನ್‌ಪಿಎ ಪ್ರಮಾಣವು ಶೇ 0.70ರಷ್ಟು ಇದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.