ADVERTISEMENT

ದೆಹಲಿಯಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟಕ್ಕೆ ಚಾಲನೆ

ಪಿಟಿಐ
Published 7 ಅಕ್ಟೋಬರ್ 2024, 14:42 IST
Last Updated 7 ಅಕ್ಟೋಬರ್ 2024, 14:42 IST
ಟೊಮೆಟೊ
ಟೊಮೆಟೊ   

ನವದೆಹಲಿ: ಟೊಮೆಟೊ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಮಾಡಲು ಆರಂಭಿಸಿದೆ. ದೆಹಲಿಯಲ್ಲಿ ಪ್ರತಿ ಕೆ.ಜಿಗೆ ₹65ರಂತೆ ಟೊಮೆಟೊ ಚಿಲ್ಲರೆ ಮಾರಾಟಕ್ಕೆ ಕೇಂದ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ.

ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್‌) ನೇರವಾಗಿ ಮಂಡಿಗಳಿಂದ ಟೊಮೆಟೊ ಖರೀದಿಸಿ ರಿಯಾಯಿತಿ ದರದಲ್ಲಿ ದೆಹಲಿಯ 50 ಪ್ರದೇಶಗಳಲ್ಲಿ ಮೊಬೈಲ್‌ ವ್ಯಾನ್‌ಗಳ ಮೂಲಕ ಮಾರಾಟ ಮಾಡುತ್ತಿದೆ. 

ಸೋಮವಾರ ದೆಹಲಿಯಲ್ಲಿ ಕೆ.ಜಿ ಟೊಮೆಟೊ ಸರಾಸರಿ ದರ ₹90ರಂತೆ ಮಾರಾಟವಾಗಿದೆ.

ADVERTISEMENT

ಟೊಮೆಟೊ ಚಿಲ್ಲರೆ ಮಾರಾಟಕ್ಕೆ ಕೃಷಿ ಭವನದಲ್ಲಿ ಚಾಲನೆ ನೀಡಿದ ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ, ಟೊಮೆಟೊ ಬೆಲೆಯನ್ನು ತಗ್ಗಿಸಲು ಪ್ರಯತ್ನಿಸುತ್ತಿದ್ದೇವೆ. ಮೂರ್ನಾಲ್ಕು ದಿನದಲ್ಲಿ ಟೊಮೆಟೊ ಧಾರಣೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಇತ್ತೀಚಿನ ವಾರಗಳಲ್ಲಿ ಮಂಡಿಗಳಿಗೆ ಉತ್ತಮ ಪ್ರಮಾಣದಲ್ಲಿ ಟೊಮೆಟೊ ನಿರಂತರವಾಗಿ ಬರುತ್ತಿದ್ದರೂ, ಚಿಲ್ಲರೆ ಬೆಲೆಯಲ್ಲಿ ಅನಗತ್ಯ ಏರಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.

ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ಪ್ರಮುಖ ಟೊಮೆಟೊ ಉತ್ಪಾದನಾ ರಾಜ್ಯಗಳಲ್ಲಿ ಮಳೆ ಮತ್ತು ಹೆಚ್ಚಿನ ಆರ್ದ್ರತೆಯಿಂದ ಟೊಮೆಟೊ ಗುಣಮಟ್ಟಕ್ಕೆ ತೊಂದರೆ ಆಗಬಹುದು ಎನ್ನಲಾಗಿದೆ. 

ದೇಶದಲ್ಲಿ ಸರಾಸರಿ ಆಲೂಗಡ್ಡೆ ದರ ಕೆ.ಜಿ ₹36.89 ಮತ್ತು ಈರುಳ್ಳಿ ₹54.36 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.