ನವದೆಹಲಿ: ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ₹ 16,361 ಕೋಟಿ ಮೊತ್ತದ ಸಾಲವನ್ನು ಮರುಪಾವತಿ ಮಾಡುವಂತೆ ಐಎಲ್‌ಆ್ಯಂಡ್‌ಎಫ್‌ಎಸ್ ಸಮೂಹಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ಶುಕ್ರವಾರ ನಿರ್ದೇಶನ ನೀಡಿದೆ.
₹ 11,296 ಕೋಟಿಯನ್ನು ನಗದು ಹಾಗೂ ₹ 5,065 ಕೋಟಿ ಮೊತ್ತವನ್ನು ಇನ್‌ಫ್ರಾಸ್ಟ್ರಕ್ಚರ್ ಇನ್‌ವೆಸ್ಟ್‌ಮೆಂಟ್ ಟ್ರಸ್ಟ್‌ನ ಯುನಿಟ್‌ಗಳ ರೂಪದಲ್ಲಿ ನೀಡುವಂತೆ ಸೂಚನೆ ನೀಡಿದೆ. ಬಹುಪಾಲು ಮೊತ್ತವನ್ನು ಸಮೂಹದ ದೊಡ್ಡ ಕಂಪನಿಗಳಾದ ಐಎಲ್‌ಆ್ಯಂಡ್‌ಎಫ್‌ಎಸ್, ಐಎಫ್‌ಐಎನ್ ಮತ್ತು ಐಟಿಎನ್‌ಎಲ್‌ಗೆ ಸಾಲ ನೀಡಿರುವವರಿಗೆ ವಿತರಿಸುವಂತೆ ಹೇಳಲಾಗಿದೆ. ಹೊಸ ಆಡಳಿತ ಮಂಡಳಿಯ ಒಪ್ಪಿಗೆ ಪಡೆದ ಬಳಿಕವೇ ಸಾಲ ಮರುಪಾವತಿ ಮಾಡುವಂತೆಯೂ ತಿಳಿಸಿದೆ.
ಐಎಲ್‌ಆ್ಯಂಡ್‌ಎಫ್‌ಎಸ್‌ನ ಒಟ್ಟಾರೆ ಸಾಲದ ಮೊತ್ತವು ₹ 99 ಸಾವಿರ ಕೋಟಿ ಇದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲದೆ, ಸಾರ್ವಜನಿಕ ನಿಧಿಗಳಿಂದಲೂ ಸಾಲ ಪಡೆದಿದೆ.
ದಿವಾಳಿ ಪ್ರಕ್ರಿಯೆಯನ್ನು ಈ ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಮುಂದಿನ ವಿಚಾರಣೆಯು ಜುಲೈ 19ಕ್ಕೆ ನಡೆಯಲಿದೆ ಎಂದು ತಿಳಿಸಿದೆ. ಸಮೂಹವು ಜೂನ್ 30ರ ಒಳಗಾಗಿ ದಿವಾಳಿ ಪ್ರಕ್ರಿಯೆ ಪೂರ್ಣಗೊಳಿಸಿ ಎನ್‌ಸಿಎಲ್‌ಟಿ ಒಪ್ಪಿಗೆಯನ್ನು ಕೇಳುವ ನಿರೀಕ್ಷೆ ಇದೆ.
₹ 55 ಸಾವಿರ ಕೋಟಿ ಸಾಲ ಮರುಪಾವತಿ ಮಾಡಿರುವುದಾಗಿ ಕಂಪನಿಯು ಮಾರ್ಚ್‌ನಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.