ನವದೆಹಲಿ: ದಿವಾಳಿತನ ಪ್ರಕ್ರಿಯೆ ಸಂಬಂಧ ಬೈಜುಸ್ ಸ್ಥಾಪಕ ಬೈಜು ರವೀಂದ್ರನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಬೇಕಾದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಸದಸ್ಯರೊಬ್ಬರು ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ ವಿಚಾರಣೆಯನ್ನು ಮುಂದೂಡಲಾಗಿದೆ.
ಎನ್‌ಸಿಎಲ್‌ಎಟಿ ಅಧ್ಯಕ್ಷ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಇರಿಸಲಾಗುವುದು. ಅವರು ಈ ವಿಷಯದ ವಿಚಾರಣೆಗೆ ಬೇರೆ ಪೀಠವನ್ನು ನಿಯೋಜಿಸಲಿದ್ದಾರೆ.
ನ್ಯಾಯಮೂರ್ತಿ ಶರದ್ ಕುಮಾರ್ ಶರ್ಮಾ ಮತ್ತು ಜತೀಂದ್ರನಾಥ್ ಸ್ವೈನ್ ಅವರನ್ನು ಒಳಗೊಂಡ ಎನ್‌ಸಿಎಲ್‌ಎಟಿಯ ಚೆನ್ನೈ ಮೂಲದ ದ್ವಿಸದಸ್ಯ ಪೀಠದ ಮುಂದೆ ಸೋಮವಾರ ಈ ವಿಷಯ ವಿಚಾರಣೆಗೆ ಬಂದಿತು.
ನಾನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪರವಾಗಿ ಈ ಹಿಂದೆ ವಾದಿಸಿದ್ದೇನೆ. ಬಿಸಿಸಿಐ ಈ ವಿಚಾರಣೆಯ ಫಲಾನುಭವಿಯಾಗಿರುವುದರಿಂದ, ಈ ವಿಚಾರಣೆಯನ್ನು ನಾನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ಶರ್ಮಾ, ವಿಚಾರಣೆಯಿಂದ ಹಿಂದೆ ಸರಿದರು.
ಎನ್‌ಸಿಎಲ್‌ಟಿ ಬೆಂಗಳೂರಿನ ಪೀಠವು ಜುಲೈ 16ರಂದು ಬಿಸಿಸಿಐ ಸಲ್ಲಿಸಿದ ಮನವಿಯನ್ನು ಅಂಗೀಕರಿಸಿ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗೆ (ಸಿಐಆರ್‌ಪಿ) ನಿರ್ದೇಶನ ನೀಡಿದೆ.
ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಬೈಜುಸ್ ₹158 ಕೋಟಿಯನ್ನು ಬಾಕಿ ಉಳಿಸಿಕೊಂಡಿದೆ. ಹಾಗಾಗಿ, ಬಿಸಿಸಿಐ ದಿವಾಳಿ ಪ್ರಕ್ರಿಯೆ ಆರಂಭಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮಂಡಳಿಯು ಅಂಗೀಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.