ADVERTISEMENT

Cafe Coffe Day: ಕಾಫಿ ಡೇ ದಿವಾಳಿ ಪ್ರಕ್ರಿಯೆಗೆ ತಡೆಯಾಜ್ಞೆ

ಪಿಟಿಐ
Published 14 ಆಗಸ್ಟ್ 2024, 15:13 IST
Last Updated 14 ಆಗಸ್ಟ್ 2024, 15:13 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಇಎಲ್‌) ವಿರುದ್ಧದ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆಗೆ ಚೆನ್ನೈನ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ), ಬುಧವಾರ ತಡೆಯಾಜ್ಞೆ ನೀಡಿದೆ.

ಕಾಫಿ ಡೇ ಎಂಟರ್‌ಪ್ರೈಸಸ್‌ ತನಗೆ ₹228.45 ಕೋಟಿ ಬಾ‍ಕಿ ಪಾವತಿಸಿಲ್ಲ ಎಂದು ಆರೋಪಿಸಿ ಐಡಿಬಿಐ ಟ್ರಸ್ಟಿಶಿಪ್‌ ಸರ್ವಿಸಸ್‌ ಲಿಮಿಟೆಡ್‌, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಶಾಖೆಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿಯು ಕಾಫಿ ಡೇ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಅನುಮತಿ ನೀಡಿತ್ತು. ಅಲ್ಲದೆ, ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿ ಕಾರ್ಯಾಚರಣೆಗೆ ಮಧ್ಯಂತರ ನಿರ್ಣಯ ಅಧಿಕಾರಿಯನ್ನು ನೇಮಿಸಿತ್ತು. 

ADVERTISEMENT

ಇದನ್ನು ಪ್ರಶ್ನಿಸಿ ಸಿಡಿಇಎಲ್‌ನ ಕಾರ್ಯ ನಿರ್ವಾಹಕ ನಿರ್ದೇಶಕಿ ಮತ್ತು ಸಿಇಒ ಮಾಳವಿಕಾ ಹೆಗ್ಡೆ ಅವರು, ಮೇಲ್ಮನವಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿಯು ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿದೆ. 

‘ಬಾಕಿ ಮೊತ್ತ ಪಾವತಿಗೆ ಸಂಬಂಧಿಸಿದಂತೆ ಸಿಡಿಇಎಲ್‌ ಮತ್ತು ಐಡಿಬಿಐ ಟ್ರಸ್ಟಿಶಿಪ್‌ ಸರ್ವಿಸಸ್‌ ಲಿಮಿಟೆಡ್‌ ಮೂರು ವಾರದೊಳಗೆ ಪ್ರಮಾಣ ಪತ್ರ ಸಲ್ಲಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಶರದ್ ಕುಮಾರ್ ಶರ್ಮಾ ಹಾಗೂ ಜತೀಂದ್ರನಾಥ ಸ್ವೈನ್ ಅವರಿದ್ದ ವಿಭಾಗೀಯ ಪೀಠವು ಸೂಚಿಸಿದೆ. 

ಕಾಫಿ ಡೇ ಕಂಪನಿಯು ಮಾರ್ಪಡಿಸಲಾಗದ ಡಿಬೆಂಚರ್‌ಗಳ (ಎನ್‌ಸಿಡಿ) ಮೂಲಕ ಬಂಡವಾಳ ಸಂಗ್ರಹಿಸಿದೆ. ಐಡಿಬಿಐ ಟ್ರಸ್ಟಿಶಿಪ್‌ ಸರ್ವಿಸಸ್‌ ಲಿಮಿಟೆಡ್‌ ಅನ್ನು ಈ ಡಿಬೆಂಚರ್‌ಗಳ ಟ್ರಸ್ಟಿಯನ್ನಾಗಿ ನೇಮಿಸಿಕೊಂಡಿತ್ತು. 2019ರ ಸೆಪ್ಟೆಂಬರ್‌ನಿಂದ 2020ರ ಜೂನ್‌ವರೆಗೆ ಐಡಿಬಿಐ ಟ್ರಸ್ಟಿಶಿಪ್‌ಗೆ ಬಡ್ಡಿ ಪಾವತಿಸಿಲ್ಲ ಎಂದು ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.