ADVERTISEMENT

ಜೆಟ್‌ ಏರ್‌ವೇಸ್‌: ಪುನಶ್ಚೇತನ ಪ್ರಸ್ತಾವಕ್ಕೆ ಎನ್‌ಸಿಎಲ್‌ಟಿ ಸಮ್ಮತಿ

ಪಿಟಿಐ
Published 22 ಜೂನ್ 2021, 16:18 IST
Last Updated 22 ಜೂನ್ 2021, 16:18 IST

ಮುಂಬೈ: ಆರ್ಥಿಕವಾಗಿ ದಿವಾಳಿ ಎದ್ದಿರುವ ಜೆಟ್‌ ಏರ್‌ವೇಸ್‌ ಕಂಪನಿಯ ಪುನಶ್ಚೇತನಕ್ಕೆ ಜಲನ್ ಕಲ್‌ರಾಕ್‌ ಒಕ್ಕೂಟ ಸಲ್ಲಿಸಿರುವ ಪ್ರಸ್ತಾವನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮಂಗಳವಾರ ಒಪ್ಪಿಗೆ ನೀಡಿದೆ.

ಎರಡು ದಶಕಕ್ಕೂ ಹೆಚ್ಚು ಅವಧಿಯಿಂದ ವಿಮಾನಯಾನ ಸೇವೆ ಒದಗಿಸುತ್ತಿದ್ದ ಜೆಟ್‌ ಏರ್‌ವೇಸ್‌ ಕಂಪನಿಯು ಹಣಕಾಸಿನ ಮುಗ್ಗಟ್ಟಿನ ಕಾರಣದಿಂದಾಗಿ 2019ರ ಏಪ್ರಿಲ್‌ನಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿತು. ಕಂಪನಿಯಿಂದ ಬರಬೇಕಿರುವ ₹ 8 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತದ ವಸೂಲಿಗೆ ಎಸ್‌ಬಿಐ ನೇತೃತ್ವದಲ್ಲಿ ಸಾಲದಾತರು ಕಾನೂನು ಕ್ರಮಕ್ಕೆ ಮುಂದಾಗಿದ್ದರು.

ಈಗ ಜಲನ್ ಕಲ್‌ರಾಕ್‌ ಒಕ್ಕೂಟದ ಪ್ರಸ್ತಾವನೆಗೆ ಎನ್‌ಸಿಎಲ್‌ಟಿ ಅನುಮೋದನೆ ನೀಡಿದ್ದು, ಪ್ರಸ್ತಾವನೆಯನ್ನು 90 ದಿನಗಳಲ್ಲಿ ಅನುಷ್ಠಾನಕ್ಕೆ ತರಬೇಕಿದೆ. ಕಂಪನಿಗೆ ಸಾಲ ನೀಡಿರುವ ಸಂಸ್ಥೆಗಳು, ಮುರಾರಿಲಾಲ್ ಜಲನ್ ಹಾಗೂ ಕಲ್‌ರಾಕ್‌ ಕ್ಯಾಪಿಟಲ್‌ ಒಟ್ಟಾಗಿ ಸಲ್ಲಿಸಿದ ಪ್ರಸ್ತಾವಕ್ಕೆ 2020ರ ಅಕ್ಟೋಬರ್‌ನಲ್ಲಿ ಒಪ್ಪಿಗೆ ನೀಡಿದ್ದವು.‌ ಜೆಟ್ ಏರ್‌ವೇಸ್‌ ವಿಮಾನಯಾನ ಸೇವೆಗಳು ಈ ವರ್ಷದ ಅಂತ್ಯಕ್ಕೂ ಮೊದಲೇ ಪುನರಾರಂಭ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.