ದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ನಿಂದ ಹೊಸ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕ ಬೇಕೇ? ಹಾಗಾದರೆ, 8454955555 ಗೆ ಮಿಸ್ಡ್‌ಕಾಲ್ ಕೊಡಿ.
ಅಲ್ಲದೆ, ಈಗಾಗಲೇ ಸಂಪರ್ಕ ಪಡೆದಿರುವ ಗ್ರಾಹಕರು ತಮ್ಮ ನೋಂದಾಯಿತ ಫೋನ್‌ನಿಂದ ಮಿಸ್ಡ್ ಕಾಲ್ ನೀಡುವ ಮೂಲಕ ಎಲ್‌ಪಿಜಿ ರೀಫಿಲ್ ಬುಕ್ ಮಾಡಬಹುದು.
ದೇಶದ ಯಾವುದೇ ಭಾಗದಲ್ಲಿ ಹೊಸ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು ಅನುಕೂಲವಾಗುವ ‘ಮಿಸ್ಡ್ ಕಾಲ್ ಸೌಲಭ್ಯ’ಕ್ಕೆ ಐಒಸಿ ಅಧ್ಯಕ್ಷ ಎಸ್ ಎಂ ವೈದ್ಯ ಸೋಮವಾರ ಚಾಲನೆ ನೀಡಿದರು ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಗ್ರಾಹಕರ ಮನೆ ಬಾಗಿಲಿಗೆ ‘ಡಬಲ್ ಬಾಟಲ್ ಸಂಪರ್ಕ’(ಡಿಬಿಸಿ– ಎರಡು ಸಿಲಿಂಡರ್‌ಗಳ) ಒದಗಿಸುವ ಸೌಲಭ್ಯವನ್ನೂ ವೈದ್ಯ ಇಂದೇ ಚಾಲನೆ ನೀಡಿದರು. ಈ ಮೂಲಕ ಈಗಾಗಲೇ ಅಸ್ತಿತ್ವದಲ್ಲಿರುವ ಸಿಂಗಲ್ ಬಾಟಲ್ ಸಂಪರ್ಕಗಳನ್ನು (SBC) ಡಿಬಿಸಿಗೆ ಪರಿವರ್ತಿಸಲಾಗುತ್ತದೆ.
ಆಸಕ್ತ ಗ್ರಾಹಕರು ಈಗಿನ 14.2 ಕೆ.ಜಿ ಸಿಲಿಂಡರ್ ಬದಲಿಗೆ 5 ಕೆ.ಜಿ ಸಿಲಿಂಡರ್ ಅನ್ನು ಬ್ಯಾಕಪ್ ಆಗಿ ಆಯ್ಕೆ ಮಾಡಿಕೊಳ್ಳಲೂ ಸಂಸ್ಥೆ ಅವಕಾಶ ನೀಡಿದೆ.
ಪ್ರಸ್ತುತ, ಮಿಸ್ಡ್‌ಕಾಲ್ ಸೌಲಭ್ಯವನ್ನು ನೀಡುತ್ತಿರುವ ಏಕೈಕ ತೈಲ ಮಾರಾಟ ಕಂಪನಿ ಐಒಸಿ ಎನಿಸಿಕೊಂಡಿದೆ.
ಗ್ರಾಹಕರು ‘ಭಾರತ್ ಬಿಲ್ ಪೇ’(ಬಿಬಿಪಿಎಸ್), ‘ಇಂಡಿಯನ್ ಆಯಿಲ್ ಒನ್ ಆ್ಯಪ್’, ಅಥವಾ https://cx.indianoil.in ಮೂಲಕ ಎಲ್‌ಪಿಜಿ ರೀಫಿಲ್ ಬುಕ್ ಅಥವಾ ಪಾವತಿ ಮಾಡಬಹುದು.
ಅಲ್ಲದೆ, ಗ್ರಾಹಕರು ವಾಟ್ಸಾಪ್ (7588888824), ಎಸ್‌ಎಂಎಸ್/ಐವಿಆರ್‌ಎಸ್ (7718955555), ಅಥವಾ ಅಮೆಜಾನ್ ಮತ್ತು ಫೇಟಿಎಂ ಮೂಲಕ ರೀಫಿಲ್ ಬುಕ್ ಅಥವಾ ಪಾವತಿ ಮಾಡಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.