ನವದೆಹಲಿ: 2024–25ರ ಹಣಕಾಸು ವರ್ಷದ ಏಪ್ರಿಲ್‌ನಿಂದ ಆಗಸ್ಟ್ 11ರ ವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹವು ಶೇ 22ರಷ್ಟು ಏರಿಕೆಯಾಗಿದ್ದು, ₹6.93 ಲಕ್ಷ ಕೋಟಿ ಸಂಗ್ರಹವಾಗಿದೆ ಎಂದು ಸರ್ಕಾರವು ಸೋಮವಾರ ತಿಳಿಸಿದೆ.
ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ₹4.47 ಲಕ್ಷ ಕೋಟಿ ಮತ್ತು ಕಂಪನಿಗಳ ವರಮಾನ ತೆರಿಗೆ (ಸಿಐಟಿ) ₹2.22 ಲಕ್ಷ ಕೋಟಿ ಇದರಲ್ಲಿ ಸೇರಿವೆ.
ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ₹21,599 ಕೋಟಿ ಮತ್ತು ಇತರೆ ತೆರಿಗೆಗಳಿಂದ ₹1,617 ಕೋಟಿ ಸಂಗ್ರಹವಾಗಿದೆ.
2023-24ರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಯಲ್ಲಿನ ಹೆಚ್ಚಳದಿಂದಾಗಿ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ. ಜುಲೈ 31ರೊಳಗೆ ದಾಖಲೆಯ 7.28 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿವೆ.
ಈ ಅವಧಿಯಲ್ಲಿ ₹1.20 ಲಕ್ಷ ಕೋಟಿ ಮರುಪಾವತಿ (ರೀಫಂಡ್) ಮಾಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮರುಪಾವತಿ ಪ್ರಮಾಣವು ಶೇ 33ರಷ್ಟು ಹೆಚ್ಚಿದೆ.
ಒಟ್ಟಾರೆಯಾಗಿ, ನೇರ ತೆರಿಗೆ ಸಂಗ್ರಹವು ₹8.13 ಲಕ್ಷ ಕೋಟಿಯಾಗಿದೆ. ಇದರಲ್ಲಿ ₹4.82 ಲಕ್ಷ ಕೋಟಿ ವೈಯಕ್ತಿಕ ಆದಾಯ ತೆರಿಗೆ ಮತ್ತು ₹3.08 ಲಕ್ಷ ಕೋಟಿ ಕಂಪನಿಗಳ ವರಮಾನ ತೆರಿಗೆ ಸೇರಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆಗಳಿಂದ ₹22.12 ಲಕ್ಷ ಕೋಟಿ ಸಂಗ್ರಹಿಸಲು ಸರ್ಕಾರವು ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.