ನವದೆಹಲಿ: ಕೆನ್ಯಾದ ನೈರೋಬಿ ನಗರದಲ್ಲಿರುವ ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆ ಪಡೆಯುವ ಸಂಬಂಧ ಅಲ್ಲಿನ ಸರ್ಕಾರದ ಜೊತೆಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಅದಾನಿ ಸಮೂಹವು ಶನಿವಾರ ಸ್ಪಷ್ಟಪಡಿಸಿದೆ.
ಜೋಮೊ ಕೆನ್ಯಾಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಜೆಕೆಐಎ) ನಿರ್ವಹಣೆ ಸಂಬಂಧ ₹21 ಸಾವಿರ ಕೋಟಿ ವೆಚ್ಚದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿತ್ತು. ಗೌತಮ್ ಅದಾನಿ ವಿರುದ್ಧದ ಲಂಚ ಪ್ರಕರಣ ಆರೋಪದ ಬೆನ್ನಲ್ಲೇ ಈ ಒಪ್ಪಂದ ರದ್ದುಪಡಿಸಿರುವುದಾಗಿ ಕೆನ್ಯಾ ಸರ್ಕಾರ ಕೂಡ ಪ್ರಕಟಿಸಿತ್ತು.
ಈ ಪ್ರಕರಣದಲ್ಲಿ ಷೇರುಪೇಟೆ ನಿಯಮಾವಳಿಗಳು ಉಲ್ಲಂಘನೆಯಾಗಿವೆಯೇ ಎನ್ನುವ ಬಗ್ಗೆ ವಿವರಣೆ ನೀಡುವಂತೆ ಅದಾನಿ ಸಮೂಹಕ್ಕೆ, ಷೇರು ವಿನಿಮಯ ಕೇಂದ್ರಗಳು ಸೂಚಿಸಿವೆ.
‘ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆಗೆ ಮುಂದಾಗಿತ್ತು. ಆದರೆ, ಪ್ರಸಕ್ತ ವರ್ಷದ ಆಗಸ್ಟ್‌ನಲ್ಲಿ ನಿಲ್ದಾಣದ ನವೀಕರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದವನ್ನು ಕೈಬಿಡಲಾಗಿದೆ’ ಎಂದು ಸಮೂಹವು ಸ್ಪಷ್ಟಪಡಿಸಿದೆ.
ಅದಾನಿ ಎನರ್ಜಿ ಸಲ್ಯೂಷನ್ಸ್ ಲಿಮಿಟೆಡ್ ಅಲ್ಲಿನ ಕೆನ್ಯಾ ವಿದ್ಯುತ್ ಪ್ರಸರಣ ಕಂಪನಿ ಜೊತೆಗೆ ಕಳೆದು ತಿಂಗಳು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಡಿ ಮೂರು ವಿದ್ಯುತ್ ಲೈನ್‌ಗಳು ಮತ್ತು ಎರಡು ಉಪ ಕೇಂದ್ರಗಳನ್ನು ನಿರ್ಮಿಸಲಿದೆ. 30 ವರ್ಷಗಳವರೆಗೆ ನಿರ್ವಹಣೆ ಮಾಡಲಿದೆ. ಈ ಒಪ್ಪಂದದಲ್ಲಿ ಷೇರುಪೇಟೆ ನಿಯಮಾವಳಿಗಳನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.