ಮುಂಬೈ: ಸ್ಕೋಡಾ ಆಟೊ ಇಂಡಿಯಾ ಸಂಸ್ಥೆಯ ಬಹುನಿರೀಕ್ಷಿತ ಎಸ್‌ಯುವಿ ಮಾದರಿಯ ‘ಕೈಲಾಕ್’ ಕಾರನ್ನು ಬುಧವಾರ ಮುಂಬೈನಲ್ಲಿ ಅನಾವರಣಗೊಳಿಸಿದೆ. ಈ ವರ್ಷದ ಫೆಬ್ರುವರಿಯಲ್ಲಿ ಕೈಲಾಕ್ ಘೋಷಣೆಯೊಂದಿಗೆ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ನಿಗದಿಪಡಿಸಿದ್ದ ಸ್ಕೋಡಾ ತನ್ನ ಹೊಸ ಕಾರನ್ನು ಇದೀಗ ಮಾರುಕಟ್ಟೆಗೆ ಪರಿಚಯಿಸಿದೆ.
ಈ ವೇಳೆ ಮಾತನಾಡಿದ ಸ್ಕೋಡಾ ಆಟೊದ ಕಾರ್ಯನಿರ್ವಹಣಾಧಿಕಾರಿ ಕ್ಲಾಸ್ ಝೆಲ್ಮರ್,‘ಭಾರತದಲ್ಲೇ ವಿನ್ಯಾಸಗೊಳಿಸಿದ ಸ್ಕೋಡಾದ ಮೊದಲ 4 ಎಂ– ಎಸ್‌ಯುವಿ ‘ಕೈಲಾಕ್‘ ಆಗಿದ್ದು, ನಮ್ಮ ಬ್ರಾಂಡ್‌ಗೆ ಹೊಸ ಸೇರ್ಪಡೆಯಾಗಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ವ್ಯವಹಾರ ವಿಸ್ತರಿಸಲು ಭಾರತವೇ ಮುಖ್ಯ ಮಾರುಕಟ್ಟೆಯಾಗಿದೆ. ಭಾರತವು ವಿಶ್ವದ ಮೂರನೇ ಅತೀ ದೊಡ್ಡ ಆಟೊ ಮಾರುಕಟ್ಟೆ ಹೊಂದಿದ್ದು, ಕಾರುಗಳ ಮಾರಾಟದಲ್ಲಿ ಶೇಕಡಾ 50ರಷ್ಟು ಎಸ್‌ಯುವಿನದ್ದೇ ಪಾಲಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಮಾರುಕಟ್ಟೆಯಲ್ಲಿ ಎಸ್‌ಯುವಿ ಖರೀದಿಸಲು ಮುಂದಾಗುವ ಗ್ರಾಹಕರಿಗೆ ‘ಕೈಲಾಕ್’ ನೆಚ್ಚಿನ ಆಯ್ಕೆಯ ಕಾರು ಆಗಲಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಕೋಡಾ ಆಟೊ ವೋಕ್ಸ್‌ವ್ಯಾಗನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿಯೂಷ್ ಅರೋರಾ ಮಾತನಾಡಿ, ‘ಕೈಲಾಕ್’ ಮೂಲಕ ಸ್ಕೋಡಾ ಆಟೊ ಇಂಡಿಯಾವು ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ಉನ್ನತ ಮಟ್ಟದಲ್ಲಿ ದೇಶಿಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅತ್ಯುತ್ತಮ ಡ್ರೈವಿಂಗ್ ಅನುಭವ ಸಿಗಲಿದೆ. ರಾಜಿಯಾಗದ ಸುರಕ್ಷತೆಯೊಂದಿಗೆ, ಮಾರುಕಟ್ಟೆಯಲ್ಲಿ ‘ಕೈಲಾಕ್’ ಗಮನಾರ್ಹ ಪರಿಣಾಮ ಬೀರಲಿದೆ’ ಎಂದು ತಿಳಿಸಿದರು.
ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಪೆಟ್ರ್ ಜನೇಬಾ ಮಾತನಾಡಿ,‘ ಮುಂದಿನ ವರ್ಷಗಳಲ್ಲಿ ಭಾರತದ ಬೆಳವಣಿಗೆಯಲ್ಲಿ ‘ಕೈಲಾಕ್’ ಶಕ್ತಿ ತುಂಬಲಿದೆ. ಇಲ್ಲಿನ ಆಟೊ ಕ್ಷೇತ್ರದಲ್ಲಿ ಹೊಸ ಯುಗ ಆರಂಭವಾಗಿದೆ. ಭಾರತದಲ್ಲಿ ಅತ್ಯಂತ ಸ್ಪರ್ಧಾತ್ಮಕ ಕ್ಷೇತ್ರಕ್ಕೆ ನಾವು ಕಾಲಿಟ್ಟಿದ್ದು, ಸುರಕ್ಷತೆ ಹಾಗೂ ಡ್ರೈವಿಂಗ್ ಅನುಭವದೊಂದಿಗೆ ‘ಕೈಲಾಕ್’ ಹೆಚ್ಚಿನ ಪರಿಣಾಮ ಬೀರಲಿದೆ. ಕುಶಾಕ್, ಸ್ಲಾವಿಯಾ ಬಳಿಕ ಕೈಲಾಕ್ ಮತ್ತಷ್ಟು ಹೊಸ ಗ್ರಾಹಕರನ್ನು ಸ್ಕೋಡಾ ಆಟೊ ಕುಟುಂಬಕ್ಕೆ ಸೇರ್ಪಡೆಗೊಳಿಸಲಿದೆ’ ಎಂದರು.
‘ಕೈಲಾಕ್’ ಎಂಬ ಹೆಸರು ಭಾರತದ್ದೇ ಆಗಿದ್ದು, ಸಂಸ್ಕೃತದಲ್ಲಿ ‘ಸ್ಫಟಿಕ’ ಎಂಬ ಅರ್ಥವನ್ನು ಹೊಂದಿದೆ. ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್ ಪ್ಲಸ್, ಪ್ರೆಸ್ಟೀಜ್ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, 25 ಸುರಕ್ಷತಾ ತಂತ್ರಜ್ಞಾನ ಹೊಂದುವ ಮೂಲಕ ಪ್ರಯಾಣಿಕರ ರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದೆ. 10.5 ಸೆಕೆಂಡ್‌ಗಳಲ್ಲಿ 0 ದಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಪ್ರತಿ ತಾಸಿಗೆ ಗರಿಷ್ಠ 188 ಕಿ.ಮೀ ತಲುಪುವ ಸಾಮರ್ಥ್ಯ ಹೊಂದಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಹೊಂದಿದ್ದು, ಮುಂಭಾಗದ ಸೀಟುಗಳು ಉತ್ತಮ ಗಾಳಿಯಾಡುವ ವ್ಯವಸ್ಥೆ ಜತೆಗೆ ಸನ್‌ರೂಫ್ ಹೊಂದಿದೆ. ಆರು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ನಿಯಂತ್ರಣ ವ್ಯವಸ್ಥೆ, ಟ್ರಾಕ್ಷನ್ ಕಂಟ್ರೊಲ್ ಹೊಂದಿದೆ. 1 ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, ಎಂಟಿ ಹಾಗೂ ಎಟಿ ವಿಭಾಗಗಳಲ್ಲಿ 6 ಸ್ಪೀಡ್ ವ್ಯವಸ್ಥೆ ಹೊಂದಿದೆ. 189 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 446 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.
ಮುಂದಿನ ತಿಂಗಳು ಡಿ.2ರಿಂದ ಬುಕ್ಕಿಂಗ್ ಆರಂಭವಾಗಲಿದ್ದು, ‘ಭಾರತ್ ಮೊಬಿಲಿಟಿ ಎಕ್ಸ್‌ಪೋ’ದಲ್ಲಿ ಪ್ರದರ್ಶಿಸಿದ ಬಳಿಕ 2025ರ ಜ.27ರಿಂದ ಗ್ರಾಹಕರಿಗೆ ಕಾರುಗಳನ್ನು ವಿತರಿಸಲಾಗುತ್ತದೆ. 7.89 ಲಕ್ಷ (ಎಕ್ಸ್ ಶೋರೂಂ ಬೆಲೆ) ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.