ADVERTISEMENT

ಹಣಕಾಸು ವರ್ಷಕ್ಕೆ ಹೊಸ ನಿಯಮ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 19:45 IST
Last Updated 31 ಮಾರ್ಚ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಕೊರೊನಾ ದಿಗ್ಬಂಧನ ಜಾರಿಯಲ್ಲಿರುವುದರ ಮಧ್ಯೆಯೇ, ಬುಧವಾರದಿಂದ 2020–21ನೇ ಸಾಲಿನ ಹೊಸ ಹಣಕಾಸು ವರ್ಷ ಜಾರಿಗೆ ಬರುತ್ತಿದೆ.

ಆದಾಯ ತೆರಿಗೆ ನಿಯಮಗಳಲ್ಲಿನ ಬದಲಾವಣೆ ಸೇರಿದಂತೆ ಬಜೆಟ್‌ನಲ್ಲಿ ಘೋಷಿಸಿರುವ ಅನೇಕ ಪ್ರಸ್ತಾವಗಳು ಏ. 1ರಿಂದ ಅನ್ವಯವಾಗಲಿವೆ.ಸದ್ಯಕ್ಕೆ ಜಾರಿಯಲ್ಲಿ ಇರುವ ವಿನಾಯ್ತಿ ಮತ್ತು ಕಡಿತ ಸೌಲಭ್ಯದ ಮುಂದುವರಿಕೆ ಇಲ್ಲವೆ ವಿನಾಯ್ತಿ ಮತ್ತು ಕಡಿತ ಸೌಲಭ್ಯಗಳಿಲ್ಲದ ಅಗ್ಗದ ತೆರಿಗೆ ದರದ ಪರ್ಯಾಯ ವ್ಯವಸ್ಥೆ ಪೈಕಿ ವೈಯಕ್ತಿಕ ಆದಾಯ ತೆರಿಗೆದಾರರು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಮ್ಯೂಚುವಲ್‌ ಫಂಡ್ಸ್‌ಗಳಲ್ಲಿನ ಹೂಡಿಕೆಗೆ ದೊರೆಯುವ ಲಾಭಾಂಶ ವೈಯಕ್ತಿಕ ಆದಾಯಕ್ಕೆ ಸೇರ್ಪಡೆಯಾಗಿ ತೆರಿಗೆಗೆ ಒಳಪಡಲಿದೆ. ಹಣಕಾಸು ವರ್ಷವೊಂದರಲ್ಲಿ ಲಾಭಾಂಶವು ₹ 5 ಸಾವಿರ ಮೀರಿದರೆ ಮೂಲದಲ್ಲಿಯೇ ತೆರಿಗೆ ಕಡಿತಕ್ಕೂ (ಟಿಡಿಎಸ್‌) ಒಳಪಡಲಿದೆ.

ADVERTISEMENT

₹ 45 ಲಕ್ಷವರೆಗಿನ ಕೈಗೆಟುಕುವ ಬೆಲೆಗೆ ಮನೆ ಖರೀದಿಸಲು ಮಾಡುವ ಸಾಲಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಇಇಎ ಅಡಿ ಹೆಚ್ಚುವರಿ ತೆರಿಗೆ ಲಾಭ ಪಡೆಯುವ ಕಾಲಮಿತಿಯನ್ನು 2021ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ.

ನೌಕರನೊಬ್ಬನ ಭವಿಷ್ಯ ನಿಧಿ (ಪಿಎಫ್‌), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಮತ್ತು ಪಿಂಚಣಿ ನಿಧಿಗೆ ಮಾಲೀಕರು ವರ್ಷವೊಂದರಲ್ಲಿ ₹ 7.5 ಲಕ್ಷಕ್ಕಿಂತ ಹೆಚ್ಚು ಕೊಡುಗೆ ನೀಡಿದರೆ, ಹೆಚ್ಚುವರಿ ಮೊತ್ತಕ್ಕೆ ನೌಕರನು ತೆರಿಗೆ ಪಾವತಿಸಬೇಕಾಗುತ್ತದೆ.

ಅನಿವಾಸಿ ಭಾರತೀಯರ (ಎನ್‌ಆರ್‌ಐ) ಸ್ಥಾನಮಾನ ನಿರ್ಧರಿಸುವ ನಿಯಮಗಳಲ್ಲಿ ಕೆಲ ಬದಲಾವಣೆಗಳೂ ಜಾರಿಗೆ ಬರಲಿವೆ. 2018–19ನೇ ಹಣಕಾಸು ವರ್ಷದ ಐ.ಟಿ ರಿಟರ್ನ್ಸ್‌, ಆಧಾರ್‌ ಜತೆ ಪ್ಯಾನ್‌ ಜೋಡಣೆಗೆ ಸರ್ಕಾರ ಈಗಾಗಲೇ ಜೂನ್‌ವರೆಗೆ ವಿಸ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.