ನವದೆಹಲಿ (ಪಿಟಿಐ): ನೈಸರ್ಗಿಕ ಅನಿಲದ ಬೆಲೆಯನ್ನು ನಿರ್ಧರಿಸುವ ಸೂತ್ರವನ್ನು ಕೇಂದ್ರವು ಪರಿಷ್ಕರಿಸಿರುವ ಪರಿಣಮವಾಗಿ, ಸಿಎನ್‌ಜಿ ಹಾಗೂ ಕೊಳವೆ ಮೂಲಕ ಮನೆಗಳಿಗೆ ತಲುಪಿಸುವ ಅಡುಗೆ ಅನಿಲದ (ಪಿಎನ್‌ಜಿ) ಬೆಲೆಯು ಶೇಕಡ 9ರಿಂದ ಶೇ 11ರವರೆಗೆ ಇಳಿಕೆ ಆಗಲಿದೆ.
ಆದರೆ, ಈ ಇಂಧನಗಳ ಬೆಲೆಯನ್ನು ನಿಯಂತ್ರಣದಿಂದ ಮುಕ್ತವಾಗಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ‘ಕಿರೀಟ್ ಪಾರಿಖ್ ಸಮಿತಿಯ ಪ್ರಮುಖ ಶಿಫಾರಸುಗಳನ್ನು ಸರ್ಕಾರವು ಒಪ್ಪಿಕೊಂಡಿರುವ ಕಾರಣ, ವಾಹನಗಳಲ್ಲಿ ಬಳಕೆ ಮಾಡುವ ಸಿಎನ್‌ಜಿ ಬೆಲೆಯನ್ನು ಹಾಗೂ ಮನೆಗಳಿಗೆ ಕೊಳವೆ ಮೂಲಕ ಪೂರೈಕೆ ಮಾಡುವ ಅಡುಗೆ ಅನಿಲದ ಬೆಲೆಯನ್ನು ಅನಿಲ ವಿತರಕರು ಶೇ 9ರಿಂದ ಶೇ 11ರವರೆಗೆ ಕಡಿಮೆ ಮಾಡಬಹುದು’ ಎಂದು ಕ್ರಿಸಿಲ್ ರೇಟಿಂಗ್ಸ್ ಹೇಳಿದೆ.
ಬೆಲೆ ನಿಗದಿಗೆ ಹಿಂದಿನ ವ್ಯವಸ್ಥೆಯೇ ಮುಂದುವರಿದಿದ್ದರೆ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇತ್ತು ಎಂದು ಕೂಡ ಅದು ಹೇಳಿದೆ. ಆದರೆ, ಈ ಇಂಧನಗಳ ಬೆಲೆಯನ್ನು 2027ರ ಸುಮಾರಿಗೆ ಸಂಪೂರ್ಣವಾಗಿ ನಿಯಂತ್ರಣಮುಕ್ತ ಆಗಿಸಬೇಕು ಎಂದು ಸಮಿತಿ ಮಾಡಿದ್ದ ಶಿಫಾರಸಿನ ವಿಚಾರದಲ್ಲಿ ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ.
‘ಬೆಲೆಯನ್ನು ನಿಯಂತ್ರಣದಿಂದ ಮುಕ್ತಗೊಳಿಸುವ ತೀರ್ಮಾನವನ್ನು ಕೇಂದ್ರವು ಮುಂದೂಡಿದೆಯೇ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಉದ್ಯಮದ ಮೂಲಗಳು ಹೇಳಿವೆ. ಅನಿಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸನ್ನು ಸರ್ಕಾರವು ಒಪ್ಪಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
‘ಹೊಸ ವ್ಯವಸ್ಥೆಯ ಅಡಿಯಲ್ಲಿ ಸಿಎನ್‌ಜಿ ಬೆಲೆಯು ಪೆಟ್ರೋಲ್, ಡೀಸೆಲ್‌ಗಿಂತ ಹಾಗೂ ಪಿಎನ್‌ಜಿ ಬೆಲೆಯು ದ್ರವೀಕೃತ ನೈಸರ್ಗಿಕ ಅನಿಲಕ್ಕಿಂತ ಶೇ 25ರಿಂದ ಶೇ 40ರವರೆಗೆ ಕಡಿಮೆ ವೆಚ್ಚದ್ದಾಗಲಿವೆ. ಹಳೆ ವ್ಯವಸ್ಥೆಯಲ್ಲಿ ಇವು ಶೇ 20ರಿಂದ ಶೇ 35ರವರೆಗೆ ಕಡಿಮೆ ವೆಚ್ಚದ್ದಾಗಿದ್ದವು’ ಎಂದು ಕ್ರಿಸಿಲ್ ರೇಟಿಂಗ್ಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.