ADVERTISEMENT

ಹೊಸ ತೆರಿಗೆ ಪದ್ಧತಿಗೆ ಹೆಚ್ಚಿದ ಒಲವು

ಪಿಟಿಐ
Published 2 ಆಗಸ್ಟ್ 2024, 15:44 IST
Last Updated 2 ಆಗಸ್ಟ್ 2024, 15:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಅಂತಿಮ ದಿನವಾದ ಜುಲೈ 31ರ ವರೆಗೆ 7.28 ಕೋಟಿಗೂ ಹೆಚ್ಚು ಐಟಿಆರ್‌ ಸಲ್ಲಿಕೆಯಾಗಿವೆ.

2023–24ನೇ ಮೌಲ್ಯಮಾಪನ ವರ್ಷದಲ್ಲಿ 6.77 ಕೋಟಿ ತೆರಿಗೆದಾರರು ರಿಟರ್ನ್ಸ್‌ ಸಲ್ಲಿಸಿದ್ದರು. ಇದಕ್ಕೆ ಹೋಲಿಸಿದರೆ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಶೇ 7.5ರಷ್ಟು ಏರಿಕೆಯಾಗಿದ್ದು, ಹೊಸ ದಾಖಲೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಶುಕ್ರವಾರ ತಿಳಿಸಿದೆ.

ರಿಟರ್ನ್ಸ್‌ ಸಲ್ಲಿಸಿದವರ ಪೈಕಿ 5.27 ಕೋಟಿ ತೆರಿಗೆದಾರರು ಹೊಸ ತೆರಿಗೆ ಪದ್ಧತಿ ಆಯ್ಕೆ (ಶೇ 72ರಷ್ಟು) ಮಾಡಿಕೊಂಡಿದ್ದಾರೆ. ಉಳಿದ 2.01 ಕೋಟಿ ತೆರಿಗೆದಾರರು ಹಳೆ ತೆರಿಗೆ ಪದ್ಧತಿ ಆಯ್ಕೆ (ಶೇ 28ರಷ್ಟು) ಮಾಡಿಕೊಂಡಿದ್ದಾರೆ. ಐಟಿಆರ್‌ ಸಲ್ಲಿಕೆಗೆ ಕೊನೆಯ ದಿನದಂದು 69.92 ಲಕ್ಷ ತೆರಿಗೆದಾರರು (ಸಂಬಳದಾರರು ಮತ್ತು ತೆರಿಗೆಯೇತರ ಆಡಿಟ್ ‍‍ಪ್ರಕರಣ) ರಿಟರ್ನ್ಸ್‌ ಸಲ್ಲಿಸಿದ್ದಾರೆ ಎಂದು ವಿವರಿಸಿದೆ.

ADVERTISEMENT

ಈ ಬಾರಿ 58.57 ಲಕ್ಷ ತೆರಿಗೆದಾರರು ಮೊದಲ ಬಾರಿಗೆ ರಿಟರ್ನ್ಸ್‌ ಸಲ್ಲಿಸಿದ್ದಾರೆ. ಇದು ತೆರಿಗೆ ವ್ಯಾಪ್ತಿ ವಿಸ್ತರಣೆಯ ಸೂಚಕವಾಗಿದೆ ಎಂದು ಹೇಳಿದೆ.

ಮೊದಲ ಬಾರಿಗೆ ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ 1ರಂದೇ ಇ–ಫೈಲಿಂಗ್‌ ಪೋರ್ಟಲ್‌ನಲ್ಲಿ ಐಟಿಆರ್‌ ಫಾರಂಗಳು ತೆರಿಗೆದಾರರಿಗೆ ಲಭ್ಯವಿದ್ದವು. ಇ–ಫೈಲಿಂಗ್‌ ಪೋರ್ಟಲ್‌ ಮೂಲಕ ಶೇ 43.82ಕ್ಕೂ ಹೆಚ್ಚು ಐಟಿಆರ್‌ಗಳು ಸಲ್ಲಿಕೆಯಾಗಿವೆ. ಉಳಿದ ಐಟಿಆರ್‌ಗಳನ್ನು ಆಪ್‌ಲೈನ್‌ ಮೂಲಕ ಸಲ್ಲಿಸಲಾಗಿದೆ ಎಂದು ತಿಳಿಸಿದೆ. 

ರಿಟರ್ನ್ಸ್‌ ಸಲ್ಲಿಕೆ ವೇಳೆ ಪೋರ್ಟಲ್‌ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗಿಲ್ಲ. ಜುಲೈ 31ರಂದು ಒಂದೇ ದಿನ 3.2 ಕೋಟಿ ಲಾಗ್‌ಇನ್‌ಗಳು ಯಶಸ್ವಿಯಾಗಿವೆ ಎಂದು ತಿಳಿಸಿದೆ.

ರಿಟರ್ನ್ಸ್‌ ಸಲ್ಲಿಕೆಯಲ್ಲಿ ಇ–ದೃಢೀಕರಣ ಪ್ರಮುಖವಾಗಿದೆ. 6.21 ಕೋಟಿ ಐಟಿಆರ್‌ಗಳನ್ನು ಇ–ದೃಢೀಕರಣ ಮಾಡಲಾಗಿದೆ. ಈ ಪೈಕಿ 5.81 ಕೋಟಿ ಐಟಿಆರ್‌ಗಳನ್ನು ಆಧಾರ್‌ ಸಂಖ್ಯೆ ಆಧಾರಿತ ಒಟಿಪಿ ಮೂಲಕ ದೃಢೀಕರಿಸಲಾಗಿದೆ ಎಂದು ವಿವರಿಸಿದೆ.  

ಜುಲೈ ತಿಂಗಳಿನಲ್ಲಿ ಟಿಐಎನ್‌ 2.0 ಪಾವತಿ ವ್ಯವಸ್ಥೆ ಮೂಲಕ 91.94 ಲಕ್ಷ ಚಲನ್‌ಗಳನ್ನು ಸ್ವೀಕರಿಸಲಾಗಿದೆ. ಈ ವ್ಯವಸ್ಥೆಯಡಿ ಏಪ್ರಿಲ್‌ 1ರ ವರೆಗೆ 1.64 ಕೋಟಿ ಚಲನ್‌ಗಳು ಸಲ್ಲಿಕೆಯಾಗಿವೆ. ಇ–ಫೈಲಿಂಗ್‌ ಸಹಾಯವಾಣಿ ಮೂಲಕ ತೆರಿಗೆದಾರರ 10.64 ಲಕ್ಷ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದು ಹೇಳಿದೆ.

ತೆರಿಗೆದಾರರು ಸಲ್ಲಿಸಿದ ರಿಟರ್ನ್ಸ್‌ ದೃಢೀಕರಣಗೊಂಡಿಲ್ಲದಿದ್ದರೆ ಸಲ್ಲಿಕೆಯ ದಿನಾಂಕದಿಂದ ಹಿಡಿದು 30 ದಿನದೊಳಗೆ ದೃಢೀಕರಣಕ್ಕೆ ಸಮಯಾವಕಾಶವಿದೆ. ಅಂತಿಮ ಗಡುವಿನೊಳಗೆ ತಪ್ಪಾಗಿ ಐಟಿಆರ್‌ ಸಲ್ಲಿಸಿದವರು ತ್ವರಿತವಾಗಿ ಸಲ್ಲಿಸಬೇಕಿದೆ ಎಂದು ಸೂಚಿಸಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.