ಬೆಂಗಳೂರು: ‘2020–21ನೇ ಹಣಕಾಸು ವರ್ಷದ ಬಜೆಟ್‌ಗೆ ಅನುಮೋದನೆ ದೊರೆಯುತ್ತಿದ್ದಂತೆ ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಚಾಲನೆ ಸಿಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
‘ಬಜೆಟ್‌ನಲ್ಲಿ ನಿಗದಿಪಡಿಸಿರುವಂತೆ ₹ 18,600 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ 20ರಷ್ಟು ಮತ್ತು ಉಳಿದ ಶೇ 60ರಷ್ಟು ಬಂಡವಾಳವನ್ನು ಇತರ ಮೂಲಗಳಿಂದ ಪಡೆಯಲಾಗುವುದು. ಇದರಲ್ಲಿ ಶೇ 40ರಷ್ಟು ಪಾಲು ಬಂಡವಾಳ ರೂಪದಲ್ಲಿ ಮತ್ತು ಶೇ 20ರಷ್ಟನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಂತಹ ಸಾಂಸ್ಥಿಕ ಮೂಲಗಳಿಂದ ಸಂಗ್ರಹಿಸಲಾಗುವುದು. ಈ ಸಾಲ ಮರುಪಾವತಿಗೆ ಕೇಂದ್ರ ಸರ್ಕಾರ ಖಾತರಿ ನೀಡಲಿದೆ. ಮೆಟ್ರೊ ಯೋಜನೆಯಂತೆ ಇತರ ಕಂಪನಿಗಳ ಸಹಯೋಗದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗುವುದು’ ಎಂದರು.
‘ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ನಂತರವೇ ಈ ಯೋಜನೆಯ ಬಜೆಟ್ ಪ್ರಸ್ತಾವಗಳನ್ನು ಸಿದ್ಧಪಡಿಸಲಾಗಿದೆ. ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಯೋಜನೆ ಕಾರ್ಯಗತಗೊಳ್ಳಲು ಈಗ ವಿಳಂಬ ಆಗುವುದಿಲ್ಲ’ ಎಂದರು.
ವಿಶ್ವಾಸ ವೃದ್ಧಿಗೆ ಕ್ರಮ: ‘ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ಸಾರ್ವಜನಿಕರ ವಿಶ್ವಾಸ ಹೆಚ್ಚಿಸಲು ಸರ್ಕಾರ ಎರಡು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಠೇವಣಿ ವಿಮೆ ಮೊತ್ತವನ್ನು ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸಹಕಾರಿ ಬ್ಯಾಂಕ್‌ಗಳು ಸದ್ಯದಲ್ಲಿಯೇ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ವ್ಯಾಪ್ತಿಗೆ ಬರಲಿವೆ. ಇದರಿಂದಾಗಿ ಸಹಕಾರಿ ಬ್ಯಾಂಕ್‌ಗಳು, ಠೇವಣಿ ಮತ್ತು ಸಾಲದ ವಿಷಯದಲ್ಲಿ ಬ್ಯಾಂಕ್‌ಗಳು ಅನುಸರಿಸುವ ಅತ್ಯುತ್ತಮ ವಿಧಾನಗಳನ್ನೇ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಇದರಿಂದ ಸಹಕಾರಿ ಬ್ಯಾಂಕ್‌ಗಳಿಗೆ ಅಂಟಿಕೊಂಡಿರುವ ಕಳಂಕ ದೂರವಾಗಿ ಅವುಗಳ ಪ್ರತಿಷ್ಠೆ ಹೆಚ್ಚಲಿದೆ’ ಎಂದರು.
‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿರುವ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬವಾಗಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಜಿಎಸ್‌ಟಿ ಪರಿಹಾರದ ಕಂತು ಸದ್ಯದಲ್ಲೇ ಬಿಡುಗಡೆಯಾಗಲಿದೆ.
‘ನರೇಗಾ ಕೂಲಿ ಮೊತ್ತದ ಬಾಕಿ ಉಳಿಸಿಕೊಂಡಿಲ್ಲ. 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ₹ 70,209 ಕೋಟಿ ಬಿಡುಗಡೆಯಾಗಿತ್ತು. ಅದಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ನಿಗದಿಪಡಿಸಿದ ಅನುದಾನವು
(₹ 2.35 ಲಕ್ಷ ಕೋಟಿ) ಗಮನಾರ್ಹವಾಗಿ ಹೆಚ್ಚಳಗೊಂಡಿದೆ’ ಎಂದರು.
ನವೋದ್ಯಮಿಗಳ ಬೇಡಿಕೆ
‘ಸ್ಟಾರ್ಟ್‌ಅಪ್‌ಗಳಿಗೆ ಬಜೆಟ್ ಕೊಡುಗೆಗೆ ಹೊರತಾದ ವಿಶೇಷ ಉತ್ತೇಜನ ನೀಡಲು ನವೋದ್ಯಮಿಗಳು ಬೇಡಿಕೆ ಮುಂದಿಟ್ಟಿದ್ದಾರೆ. ಈ ಸಂಬಂಧ ಇನ್ನಷ್ಟು ವಿವರಗಳನ್ನು ಸಲ್ಲಿಸಿದರೆ ಅವುಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿರುವೆ’ ಎಂದು ನಿರ್ಮಲಾ ತಿಳಿಸಿದರು.
ಸುದ್ದಿಗೋಷ್ಠಿಗೂ ಮುನ್ನ ನಡೆದ ಉದ್ಯಮಿಗಳ ಜತೆಗಿನ ಬಜೆಟ್ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.