ಟೊಕಿಯೊ: ಜಪಾನ್ ಮೂಲದ ಆಟೊಮೊಬೈಲ್ ಕಂಪನಿ ನಿಸಾನ್ ಜಾಗತಿಕವಾಗಿ 9 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ.
ಮಾರಾಟ ಕುಸಿತದ ಮುನ್ಸೂಚನೆ ಇದ್ದು, ‘ಭವಿಷ್ಯದ ಗಂಭೀರ ಪರಿಸ್ಥಿತಿ’ ಎದುರಿಸುವ ಸಲುವಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದೆ.
ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕಂಪನಿಯ ನಿವ್ವಳ ಶೇ 93ರಷ್ಟು ಕುಸಿದಿದೆ. ಉತ್ತರ ಅಮೆರಿಕದ ಮಾರುಕಟ್ಟೆಯಲ್ಲಿ ಮಾರಾಟ ಇಳಿಕೆಯಾಗಿದ್ದೆ ಇದಕ್ಕೆ ಕಾರಣ ಎಂದು ಸಿಇಒ ಮಕೊಟೊ ಉಚಿಡಾ ಹೇಳಿದ್ದಾರೆ.
ಚೀನಾ ಸರ್ಕಾರವು ಇ–ವಾಹನಗಳನ್ನು ಉತ್ತೇಜಿಸುತ್ತಿದ್ದು, ಅಲ್ಲಿ ನಿಸಾನ್ ಸೇರಿ ಹಲವು ಆಟೊಮೊಬೈಲ್ ಕಂಪನಿಗಳ ಮಾರುಕಟ್ಟೆ ಕುಸಿತವಾಗಿದೆ.
‘ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದು, ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಮಾರುಕಟ್ಟೆಯಲ್ಲಿನ ಬದಲಾವಣೆಗಳಿಗೆ ತ್ವರಿತವಾಗಿ ಹೊಂದಿಕೊಳ್ಳಲು, ವ್ಯವಹಾರದಲ್ಲಿ ಚೇತರಿಕೆ ಕಾಣಲು ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ನಿಸಾನ್ ಪ್ರಕಟಣೆಯಲ್ಲಿ ತಿಳಿಸಿದೆ.
‘ನಿಸಾನ್ ತನ್ನ ಜಾಗತಿಕ ಉತ್ಪಾದನಾ ಸಾಮರ್ಥ್ಯವನ್ನು ಶೇ 20ರಷ್ಟು ಕಡಿತಗೊಳಿಸಲಿದೆ. ಜಾಗತಿಕವಾಗಿ 9 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತದೆ’ ಎಂದು ಹೇಳಿದೆ.
ನವೆಂಬರ್ ತಿಂಗಳಿನಿಂದ ಅನ್ವಯವಾಗುವಂತೆ ಉಚಿಡಾ ಅವರು ತಮ್ಮ ಮಾಸಿಕ ವೇತನವನ್ನು ಶೇ 50ರಷ್ಟು ಮಾತ್ರ ಪಡೆಯಲಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರೂ ಕೂಡ ತಮ್ಮ ವೇತನವನ್ನು ಕಡಿಮೆ ಮಾಡಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಇದರ ಜೊತೆಗೆ ಮಿತ್ಸುಬಿಶಿ ಮೋಟಾರ್ಸ್‌ನಲ್ಲಿರುವ ಷೇರುಗಳನ್ನು ಅವರಿಗೆ ಮಾರಾಟ ಮಾಡುವುದಾಗಿ ನಿಸಾನ್ ತಿಳಿಸಿದೆ. ಸದ್ಯ ಮಿತ್ಸುಬಿಶಿಯಲ್ಲಿ ಶೇ 24–34ರಷ್ಟು ಪಾಲನ್ನು ನಿಸಾನ್ ಹೊಂದಿದೆ. ಅದಾಗ್ಯೂ ಉತ್ತಮ ಸಂಬಂಧ ಮುಂದುವರಿಯಲಿದೆ ಎಂದು ಉಚಿಡಾ ತಿಳಿಸಿದ್ದಾರೆ.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.