ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ‘ನಾವು ತಪ್ಪು ಮಾಡಿದ್ದೇವೆ ಎಂಬುದಾಗಿ ಹೇಳಿಲ್ಲ’ ಎಂದು ಅದಾನಿ ಸಮೂಹವು ಪ್ರತಿಕ್ರಿಯೆ ನೀಡಿದೆ. ಅದಾನಿ ಸಮೂಹದ ವಿರುದ್ಧ ನಡೆಯುತ್ತಿರುವ ಪ್ರಕರಣದ ತನಿಖೆ ಪೂರ್ಣಗೊಳಿಸಲು ಇನ್ನೂ ಆರು ತಿಂಗಳ ಸಮಯಾವಕಾಶ ಬೇಕು ಎಂದು ಸೆಬಿ, ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹದ ಕುರಿತು ಮಾಡಿರುವ ಆರೋಪಗಳ ಕುರಿತ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್, ಸೆಬಿಗೆ ಮಾರ್ಚ್ 2ರಂದು ಸೂಚಿಸಿತ್ತು. ಇದರ ಅನ್ವಯ ಸೆಬಿ ಮೇ 2ರಂದು ವರದಿ ಸಲ್ಲಿಸಬೇಕು. ಹಿಂಡನ್‌ಬರ್ಗ್ ರಿಸರ್ಚ್‌ನ ಎಲ್ಲ ಆರೋಪಗಳನ್ನು ಅದಾನಿ ಸಮೂಹ ಅಲ್ಲಗಳೆದಿದೆ.
ಅನುಮಾನಾಸ್ಪದವಾಗಿರುವ 12 ವಹಿವಾಟುಗಳ ತನಿಖೆ, ಪರಿಶೀಲನೆಯು ‘ಇವು ಹಲವು ಉಪ ವಹಿವಾಟುಗಳನ್ನು ಒಳಗೊಂಡಿವೆ ಎಂಬುದನ್ನು ತೋರಿಸುತ್ತಿದೆ. ಈ ವಹಿವಾಟುಗಳನ್ನು ಸೂಕ್ಷ್ಮವಾಗಿ ತನಿಖೆಗೆ ಒಳಗಪಡಿಸಬೇಕು ಎಂದಾದರೆ ಹಲವು ಮೂಲಗಳಿಂದ ದತ್ತಾಂಶ ಸಂಗ್ರಹಿಸಬೇಕು. ಕಂಪನಿಗಳು ಸಲ್ಲಿಸುವ ವಿವರಗಳನ್ನು ತಾಳೆ ಮಾಡಬೇಕು’ ಎಂದು ಸೆಬಿ, ತನ್ನ ಮನವಿಯಲ್ಲಿ ಹೇಳಿದೆ.
‘ಸೆಬಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ, ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂಬುದು ಉಲ್ಲೇಖಾರ್ಹ’ ಎಂದು ಅದಾನಿ ಸಮೂಹ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.