ನವದೆಹಲಿ: ರೂಪೇ ಮತ್ತು ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದಕ್ಕೆ ಜನವರಿ 1 ರಿಂದಮರ್ಚಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕ ಇರುವುದಿಲ್ಲ.
‘ದೇಶದಲ್ಲಿನಗದುರಹಿತ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ರೆವಿನ್ಯೂ ಇಲಾಖೆ ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಶನಿವಾರ ಇಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಇಒಗಳ ಜತೆ ಸಭೆ ನಡೆಸಿದ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.
‘ವಾರ್ಷಿಕ ₹ 50 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸುವ ಕಂಪನಿಗಳು ತಮ್ಮ ಗ್ರಾಹಕರಿಗೆ ರೂಪೇ ಡೆಬಿಟ್ ಕಾರ್ಡ್ ಮತ್ತು ಯುಪಿಐ ಕ್ಯೂಆರ್ ಕೋಡ್ ಮೂಲಕ ಪಾವತಿ ಸೌಲಭ್ಯ ನೀಡುವುದನ್ನು ರೆವಿನ್ಯೂ ಇಲಾಖೆ ಕಡ್ಡಾಯಗೊಳಿಸಲಿದೆ.
ಗ್ರಾಹಕರಿಂದ ಡಿಜಿಟಲ್ ರೂಪದಲ್ಲಿ (ಕ್ರೆಡಿಟ್ / ಡೆಬಿಟ್ ಕಾರ್ಡ್, ಯುಪಿಐ ಇತ್ಯಾದಿ) ಪಾವತಿಸಿದ್ದನ್ನು ಬ್ಯಾಂಕ್‌ಗಳು ಸ್ವೀಕರಿಸಿದ್ದಕ್ಕೆ ವರ್ತಕರು ಬ್ಯಾಂಕ್‌ಗಳಿಗೆ ಪಾವತಿಸುವ ವೆಚ್ಚವು ‘ಎಂಡಿಆರ್’ ಆಗಿರುತ್ತದೆ. ವಹಿವಾಟಿನ ಮೊತ್ತ ಆಧರಿಸಿ ಈ ಶೇಕಡವಾರು ಶುಲ್ಕ ನಿಗದಿಪಡಿಸಲಾಗುತ್ತದೆ.
ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಲಪಡಿಸಲು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ರೂಪೇ ಡೆಬಿಟ್ ಕಾರ್ಡ್ ಮತ್ತು ಭೀಮ್ ಯುಪಿಐ ಅನ್ನು ಜನಪ್ರಿಯಗೊಳಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೂ ಸೂಚನೆ ನೀಡಲಾಗಿದೆ.
ಹಣಕಾಸು, ರೆವಿನ್ಯೂ, ಐ.ಟಿ ಕಾರ್ಯದರ್ಶಿಗಳು, ಸಿಬಿಐ ನಿರ್ದೇಶಕ, ಆರ್‌ಬಿಐನ ಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಪಾವತಿ ನಿಗಮದ ಸಿಇಒ ಸಭೆಯಲ್ಲಿ ಭಾಗವಹಿಸಿದ್ದರು.
ಜುಲೈನಲ್ಲಿ ಮಂಡಿಸಿದ್ದ ಬಜೆಟ್ ಭಾಷಣದಲ್ಲಿಯೇ ಸೀತಾರಾಮನ್ ಅವರು ‘ಎಂಡಿಆರ್‘ ಕೈಬಿಡುವ ಬಗ್ಗೆ ಪ್ರಸ್ತಾಪಿಸಿದ್ದರು.
ಇ–ಹರಾಜು ಜಾಲತಾಣ: ಉದ್ದೇಶ ಪೂರ್ವಕ ಸುಸ್ತಿದಾರರ ಆಸ್ತಿಗಳನ್ನು ಹರಾಜು ಹಾಕಲು ಇ–ಹರಾಜು ಜಾಲತಾಣಕ್ಕೆ ಚಾಲನೆ ನೀಡಲಾಗಿದೆ. ಸರ್ಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕ್‌ಗಳ ಜಾಲತಾಣಕ್ಕೂ ಇದು ಸಂಪರ್ಕ ಹೊಂದಿರಲಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಉದ್ದೇಶಪೂರ್ವಕ ಸುಸ್ತಿದಾರರ 35 ಸಾವಿರ ಆಸ್ತಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಜಾಲತಾಣಕ್ಕೆ ಅಪ್‌ಲೋಡ್ ಮಾಡಿವೆ.
‘ಪ್ರಾಮಾಣಿಕ ಅಧಿಕಾರಿಗಳ ರಕ್ಷಣೆ’
‘ಪ್ರಾಮಾಣಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಬ್ಯಾಂಕ್ ಅಧಿಕಾರಿಗಳನ್ನು ರಕ್ಷಿಸಲಾಗುವುದು’ ಎಂದು ನಿರ್ಮಲಾ ಭರವಸೆ ನೀಡಿದ್ದಾರೆ.
‘ಪ್ರಾಮಾಣಿಕರು, ಸಿಬಿಐ, ಸಿವಿಸಿ ಮತ್ತು ಸಿಎಜಿಯಂತಹ ತನಿಖಾ ಸಂಸ್ಥೆಗಳ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಬ್ಯಾಂಕ್‌ನ ಹಿತದೃಷ್ಟಿಯಿಂದ ನಿರ್ಧಾರ ಗಳನ್ನು ತೆಗೆದುಕೊಳ್ಳಲು ಆತಂಕ, ಭಯ ಪಡುವ ಅಗತ್ಯ ಇಲ್ಲ’ ಎಂದು ಅವರು
ಅಧಿಕಾರಿಗಳ ವಿರುದ್ಧ ದೀರ್ಘಾವಧಿಯಿಂದಇತ್ಯರ್ಥವಾಗದೇ ಬಾಕಿ ಇರುವ ಆರೋಪದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.