ನವದೆಹಲಿ: ಆದಾಯ ತೆರಿಗೆ ವಿವರ ಸಲ್ಲಿಕೆಯ (ಐಟಿಆರ್) ಗಡುವು ಇದೇ ತಿಂಗಳ 31ಕ್ಕೆ ಅಂತ್ಯವಾಗಲಿದ್ದು, ಅದನ್ನು ವಿಸ್ತರಿಸುವ ಆಲೋಚನೆ ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ ಎಂದು ರೆವಿನ್ಯು ಕಾರ್ಯದರ್ಶಿ ತರುಣ್ ಬಜಾಜ್ ಶುಕ್ರವಾರ ಹೇಳಿದ್ದಾರೆ.
2021–22ನೇ ಹಣಕಾಸು ವರ್ಷಕ್ಕೆ ಜುಲೈ 20ರವರೆಗೆ 2.3 ಕೋಟಿಗೂ ಅಧಿಕ ರಿಟರ್ನ್ಸ್‌ಗಳು ಸಲ್ಲಿಕೆ ಆಗಿವೆ. ರಿಟರ್ನ್ಸ್ ಸಲ್ಲಿಕೆ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರತಿ ಬಾರಿಯೂ ರಿಟರ್ನ್ಸ್ ಸಲ್ಲಿಕೆ ಅವಧಿಯು ವಿಸ್ತರಣೆ ಆಗುತ್ತದೆ ಎಂದು ಜನರು ಭಾವಿಸುತ್ತಾರೆ. ಹೀಗಾಗಿ ಆರಂಭದಲ್ಲಿ ರಿಟರ್ನ್ಸ್ ಸಲ್ಲಿಕೆ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಈಗ ದಿನವೂ 15 ಲಕ್ಷದಿಂದ 18 ಲಕ್ಷ ರಿಟರ್ನ್ಸ್ ಸಲ್ಲಿಕೆ ಆಗುತ್ತಿದೆ. ಈ ಸಂಖ್ಯೆಯು ನಿಧಾನವಾಗಿ 25 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ ಆಗಲಿದೆ ಎಂದು ಬಜಾಜ್ ಹೇಳಿದ್ದಾರೆ.
2020–21ನೇ ಹಣಕಾಸು ವರ್ಷದಲ್ಲಿ 5.89 ಕೋಟಿ ರಿಟರ್ನ್ಸ್ ಸಲ್ಲಿಕೆ ಆಗಿತ್ತು. ಆ ಅವಧಿಗೆ ರಿಟರ್ನ್ಸ್ ಸಲ್ಲಿಕೆ ಗಡುವನ್ನು 2021ರ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.